ʼಈ ದಿನʼ ಸಮೀಕ್ಷೆ | ಬಿಗಡಾಯಿಸಿದ ನಿರುದ್ಯೋಗ ; ಮೋದಿ ಆಡಳಿತಕ್ಕೆ ಬೇಸರಗೊಂಡ ಮತದಾರ

Date:

Advertisements

ಚುನಾವಣೆ ನಡೆಯಬೇಕಾದದ್ದು ನಿಜವಾಗಿಯೂ ಜನರ ನೈಜ ಸಮಸ್ಯೆಗಳ ಮೇಲೆ ಅಲ್ಲವೇ? ಇನ್ನೂ ಕಾಲ ಮಿಂಚಿಲ್ಲ, ಬಿಜೆಪಿ ತನ್ನ ಕೋಮುಚಾಳಿಯನ್ನು ಬದಿಗಿರಿಸಿ, ಆಗಿರುವ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿಯಬೇಕಿದೆ

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂಬ ಘೋಷಣೆಯನ್ನು ನರೇಂದ್ರ ಮೋದಿಯವರು 2014ರ ಚುನಾವಣೆ ಸಂದರ್ಭದಲ್ಲಿ ಮಾಡಿದ್ದರು. ಆದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ಇರುವ ಉದ್ಯೋಗಗಳನ್ನು ಕಳೆದುಕೊಂಡಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಮೋದಿ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಕಳೆದ 40 ವರ್ಷಗಳಲ್ಲೇ ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.

‘ಈದಿನ.ಕಾಂ’ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿರುವ ಜನರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಬಿಜೆಪಿ ಕಾರಣ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

Advertisements

“ಕಳೆದ ಹತ್ತು ವರ್ಷಗಳಲ್ಲಿ ನಿರುದ್ಯೋಗವು ಬಹಳಷ್ಟು ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂದು ನೀವು ಭಾವಿಸುತ್ತೀರಾ? ಹೆಚ್ಚಾದರೆ ಯಾರು ಹೊಣೆ?” ಎಂದು ಜನರನ್ನು ಪ್ರಶ್ನಿಸಲಾಗಿತ್ತು. ನಿರುದ್ಯೋಗ ಹೆಚ್ಚಾಗಿದೆ, ಇದಕ್ಕೆ ಬಿಜೆಪಿ ಕಾರಣ ಎಂದು ಶೇ. 37.89ರಷ್ಟು ಜನರು ಹೇಳಿದ್ದಾರೆ; ಇದಕ್ಕೆ ಕಾಂಗ್ರೆಸ್ ಕಾರಣ ಎಂದು ಶೇ. 19.88ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಕಾರಣ ಎಂದು ಶೇ. 18.26ರಷ್ಟು ಜನರು ಅಭಿಪ್ರಾಯ ತಾಳಿದ್ದಾರೆ. ನಿರುದ್ಯೋಗ ಹೆಚ್ಚಳಕ್ಕೆ ಜೆಡಿಎಸ್ ಕೂಡ ಕಾರಣ ಎಂದು ಶೇ. 1.64ರಷ್ಟು ಜನರು ಹೇಳಿದ್ದಾರೆ. ಶೇ. 11.03ರಷ್ಟು ಜನರು ನಿರುದ್ಯೋಗ ಕಡಿಮೆಯಾಗಿದೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಶೇ. 11.29ರಷ್ಟು ಜನರು ತಿಳಿಸಿದ್ದಾರೆ.

eedina survey
ಈದಿನ.ಕಾಂ ಚುನಾವಣಾ ಪೂರ್ವ ಸಮೀಕ್ಷೆ

ಸಿಎಸ್‌ಡಿಎಸ್ ಲೋಕನೀತಿ ನಡೆಸಿದ ಸಮೀಕ್ಷೆಯಲ್ಲೂ ಇಂಥಹದ್ದೇ ಅಂಕಿ- ಅಂಶಗಳು ಹೊರಬಿದ್ದಿವೆ. ”ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗಿತ್ತೋ? ಕಷ್ಟವಾಗಿತ್ತೋ?” ಎಂಬ ಪ್ರಶ್ನೆಗೆ ಶೇ.62ರಷ್ಟು ಜನರು, “ಉದ್ಯೋಗ ಪಡೆಯುವುದು ಕಷ್ಟವಾಗಿದೆ” ಎಂದಿದ್ದಾರೆ. ಈ ಅಭಿಪ್ರಾಯ ತಾಳಿದವರಲ್ಲಿ ಶೇ.62ರಷ್ಟು ಗ್ರಾಮೀಣರು, ಶೇ. 59ರಷ್ಟು ಪಟ್ಟಣವಾಸಿಗಳು, ಶೇ. 65ರಷ್ಟು ನಗರವಾಸಿಗಳು ಇದ್ದಾರೆ.

ಒಟ್ಟಾರೆಯಾಗಿ ನೋಡಿದರೆ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ ಎಂದು ಹೇಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಬಿಜೆಪಿ ಸರ್ಕಾರವನ್ನು ದೂಷಿಸುವವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಚುನಾವಣಾ ಪ್ರಣಾಳಿಕೆಗಳನ್ನು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬಿಡುಗಡೆ ಮಾಡಿವೆ. ಯುವಜನರ ಬವಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಎರಡು ಪಕ್ಷಗಳು ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆಯಾ ಎಂಬುದು ಚರ್ಚೆಯ ವಿಷಯವಾಗಬೇಕಿದೆ.

ತಾವು ಅಧಿಕಾರಕ್ಕೆ ಬಂದರೆ ಎಷ್ಟು ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ’ಮೋದಿ ಕೀ ಗ್ಯಾರಂಟಿ ಫಾರ್ ಯಂಗ್ ಸಿಟಿಜನ್‌’ ಭಾಗದಲ್ಲಿ ತಾನು ಯುವಜನರಿಗಾಗಿ ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಬಿಜೆಪಿ ಬಣ್ಣಿಸಿಕೊಂಡಿದೆ. ಪರೀಕ್ಷೆಗಳಲ್ಲಿ ಗೋಲ್ ಮಾಲ್‌ ನಡೆಯುವುದನ್ನು ತಡೆಯಲು ಈಗಾಗಲೇ ಕಟ್ಟುನಿಟ್ಟಿನ ಕಾನೂನು ಮಾಡಿರುವುದಾಗಿ ಮತ್ತು ಅದನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುವುದಾಗಿ ತಿಳಿಸಿದೆ. ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಲಾಗಿದೆ, ಮುಂದಿನ ದಿನಗಳಲ್ಲೂ ಈ ಕೆಲಸವನ್ನು ಮುಂದುವರಿಸಲಾಗುತ್ತದೆ, ಸರ್ಕಾರಿ ಉದ್ಯೋಗಗಳ ನೇಮಕಾತಿ ಹೆಚ್ಚಿಸಲಾಗುತ್ತದೆ ಎಂದಿದೆ. ಸ್ವ-ಉದ್ಯೋಗ ಮಾಡುವವರಿಗೆ ಮುದ್ರಾ ಯೋಜನೆಯಡಿ 20 ಲಕ್ಷ ರೂ.ಗಳವರೆಗೆ ಸೌಲಭ್ಯ ಮುಂದುವರಿಸಲಾಗುವುದು ಎಂದು ಹೇಳಿದೆ. ಖಚಿತ ಗೊತ್ತು ಗುರಿಗಳನ್ನು ಬಿಜೆಪಿ ಪ್ರಣಾಳಿಕೆ ಹೇಳುತ್ತಿಲ್ಲ.

ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಪ್ರಾಣಾಳಿಕೆ ಇರುವುದನ್ನು ಗಮನಿಸಬಹುದು. ’ಯೂತ್’ ವಿಭಾಗವು ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದೆ. 25 ವರ್ಷದೊಳಗಿನ ಡಿಪ್ಲೊಮಾ ಮತ್ತು ಪದವೀಧರ ಯುವಜನರಿಗೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಒಂದು ವರ್ಷದ ಅಪ್ರೆಂಟಿಸ್‌ ಸೌಲಭ್ಯವನ್ನು ಕಲ್ಪಿಸಲು ಅಪ್ರೆಂಟೈಸ್‌ಶಿಪ್‌ ಹಕ್ಕು ಕಾನೂನು ತರಲಾಗುವುದು ಎಂದು ಕಾಂಗ್ರೆಸ್ ನುಡಿದಿದೆ. ಅಪ್ರೆಂಟಿಸ್‌ಗಳು ವರ್ಷಕ್ಕೆ ₹1 ಲಕ್ಷ ರೂ. ಪಡೆಯಲಿದ್ದಾರೆ. ಅಪ್ರೆಂಟಿಸ್‌ಶಿಪ್ ಮೂಲಕ ಕೌಶಲ ಅಭಿವೃದ್ಧಿ, ಉದ್ಯೋಗಾವಕಾಶ ಹೆಚ್ಚಿಸಲಾಗುವುದು- ಇದು ಕಾಂಗ್ರೆಸ್ ನೀಡುವ ಗ್ಯಾರಂಟಿ ಎಂದಿದ್ದಾರೆ.

ನೇಮಕಾತಿ ಪರೀಕ್ಷೆಗಳ ಮುನ್ನ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ಪ್ರಕರಣಗಳನ್ನು ‌ಇತ್ಯರ್ಥಗೊಳಿಸಲು ಮತ್ತು ಸಂತ್ರಸ್ತರಿಗೆ ಧನ ಪರಿಹಾರವನ್ನು ನೀಡಲು ನಾವು ತ್ವರಿತ ನ್ಯಾಯಾಲಯಗಳ ಸೌಲಭ್ಯ ಕಲ್ಪಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಕೇಂದ್ರ ಸರ್ಕಾರದ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಸ್ಟಾರ್ಟ್-ಅಪ್‌ಗಳಿಗಾಗಿ ಫಂಡ್ ಆಫ್ ಫಂಡ್ಸ್ ಸ್ಕೀಮ್ ಪುನರ್‌ ರಚನೆ ಮಾಡಲಾಗುವುದು, ಲಭ್ಯವಿರುವ ನಿಧಿಯ 50 ಪ್ರತಿಶತವನ್ನು ಎಲ್ಲಾ ಜಿಲ್ಲೆಗಳಲ್ಲಿ ಸಮಾನವಾಗಿ ಸಾಧ್ಯವಾದಷ್ಟು ಹಂಚಿಕೆ ಮಾಡಲಾಗುತ್ತದೆ, 40 ವರ್ಷ ಒಳಗಿನ ಯುವಜನರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಹಣವನ್ನು ಒದಗಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ 1 ಏಪ್ರಿಲ್ 2020 ರಿಂದ 30 ಜೂನ್ 2021ರವರೆಗೆ ಅರ್ಹತಾ ಪಬ್ಲಿಕ್ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದ ಅರ್ಜಿದಾರರಿಗೆ ಸರ್ಕಾರವು ಒಂದು ಬಾರಿ ಪರಿಹಾರವನ್ನು ನೀಡುತ್ತದೆ. ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಪಡೆಯುವುದನ್ನು ರದ್ದುಗೊಳಿಸುತ್ತೇವೆ. 21 ವರ್ಷದೊಳಗಿನ ಪ್ರತಿಭಾವಂತ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ತಿಂಗಳಿಗೆ ₹10,000 ಕ್ರೀಡಾ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆಗಳನ್ನು ನೀಡಿದೆ.

ಬಿಜೆಪಿ/ಎನ್‌ಡಿಎ ಸರ್ಕಾರ ಪ್ರಕಟಿಸಿದ ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಶಿಕ್ಷಣ ತಜ್ಞರು ಮತ್ತು ಹಲವಾರು ರಾಜ್ಯ ಸರ್ಕಾರಗಳು ವಿರೋಧಿಸಿವೆ. ಶಿಕ್ಷಣವು ಏಕಕಾಲೀನ ವಿಷಯವಾಗಿದೆ ಮತ್ತು ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯಗಳ ಹಕ್ಕುಗಳನ್ನು ಗೌರವಿಸಬೇಕು. ಆದ್ದರಿಂದ, ನಾವು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಎನ್‌ಇಪಿಯನ್ನು ಮರುಪರಿಶೀಲಿಸುತ್ತೇವೆ, ಜೊತೆಗೆ ತಿದ್ದುಪಡಿ ಮಾಡುತ್ತೇವೆ ಎಂದಿರುವುದು ಖಂಡಿತವಾಗಿಯೂ ಭರವಸೆಯನ್ನು ಹುಟ್ಟಿಸುತ್ತದೆ. ಶೋಷಿತ, ಅಲ್ಪಸಂಖ್ಯಾತ, ಒಬಿಸಿ ಜನವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದಲೇ ದೂರವಿಡುವ ಸಂಚನ್ನು ಎನ್‌ಇಪಿ ಹೊಂದಿದೆ ಎಂದು ಶಿಕ್ಷಣ ತಜ್ಞರು ಮೊದಲಿನಿಂದಲೂ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಹೀಗಾಗಿ ಕಾಂಗ್ರೆಸ್ ನೀಡಿರುವ ಈ ಭರವಸೆ ಎಲ್ಲಕ್ಕಿಂತ ಮುಖ್ಯವಾಗಿದೆ.

“ಸಾರ್ವಜನಿಕ ಶಾಲೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ವಿಶೇಷ ಶುಲ್ಕ ವಿಧಿಸುವ ಪದ್ಧತಿಯನ್ನು ನಾವು ಕೊನೆಗೊಳಿಸುತ್ತೇವೆ. ಯುಪಿಎ ಸರ್ಕಾರದ ಅಡಿಯಲ್ಲಿ ಜಾರಿಗೊಳಿಸಲಾದ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಕಾರ್ಯಕ್ರಮವನ್ನು ಕಾಂಗ್ರೆಸ್ ಪುನರುಜ್ಜೀವನಗೊಳಿಸುತ್ತದೆ ಮತ್ತು ವಿಶೇಷವಾಗಿ SC, ST, OBC, EWS ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾರ್ಥಿಗಳಿಗೆ ₹7.5 ಲಕ್ಷದವರೆಗೆ ಮೇಲಾಧಾರ ರಹಿತ (ಅಂದರೆ ಆಸ್ತಿ ಅಥವಾ ಇನ್ಯಾವುದೇ ಅಡಮಾನವನ್ನು ಇಡದಿರುವುದು) ಶಿಕ್ಷಣ ಸಾಲವನ್ನು ವಿಸ್ತರಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುತ್ತದೆ” ಸೇರಿದಂತೆ ಮೊದಲಾದ ಆಶ್ವಾಸನೆಗಳನ್ನು ಕಾಂಗ್ರೆಸ್ ಪ್ರಕಟಿಸಿದೆ.

“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು” ಎಂದು ಮೋದಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಇರುವ ಉದ್ಯೋಗಗಳನ್ನು ಜನರು ಕಳೆದುಕೊಂಡಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರುದ್ಯೋಗ ದರವು 2012ರಲ್ಲಿ (ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ) 2.1% ಇತ್ತು. ಇದು ಈಗ 6.1%ಗೆ ಏರಿಕೆಯಾಗಿದೆ. ಗಮನಾರ್ಹವಾಗಿ, 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು.

ಅದರಲ್ಲೂ, ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಹದಗೆಟ್ಟಿತು. ಪದವೀಧರರಲ್ಲಿ ನಿರುದ್ಯೋಗ ದರವು 19.2% ರಿಂದ 35.8%ಕ್ಕೆ ಏರಿದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ಈ ನಿರುದ್ಯೋಗ ದರವು 36.2%ಗೆ ದಾಖಲಾಗಿದೆ. ಭಾವನಾತ್ಮಕ ವಿಚಾರಗಳಿಗಿಂತ ಬದುಕಿನ ಸಂಗತಿಗಳಿಗೆ ಜನರು ಆದ್ಯತೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಚುನಾವಣೆ ನಡೆಯಬೇಕಾದದ್ದು ನಿಜವಾಗಿಯೂ ಜನರ ನೈಜ ಸಮಸ್ಯೆಗಳ ಮೇಲೆ ಅಲ್ಲವೇ? ಇನ್ನೂ ಕಾಲ ಮಿಂಚಿಲ್ಲ, ಬಿಜೆಪಿ ತನ್ನ ಹಳೆಯ ಕೋಮುಚಾಳಿಯನ್ನು ಬದಿಗಿರಿಸಿ, ಪ್ರಣಾಳಿಕೆಯ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ, ಜನರ ಸಮಸ್ಯೆಗಳ ಕುರಿತು ಮಾತನಾಡಬೇಕಿದೆ. ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡು, ಜನರ ಆಶೋತ್ತರಗಳಿಗೆ ಕಿವಿಯಾಗಬೇಕಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X