ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಭಾರೀ ಅನ್ಯಾಯ ಮಾಡುತ್ತಿದೆ ಎಂಬ ಗಂಭೀರ ಆರೋಪವಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತರಿಗೆ ಹಂಚಿಕೆಯಲ್ಲಿ ನ್ಯಾಯಯುತವಾಗಿ ಕೊಡಬೇಕಾದ ಪಾಲನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂಬ ದೂರು ಬಹಳ ವರ್ಷಗಳಿಂದ ಕೇಳಿಬಂದಿದೆ. ಈಗಾಗಲೇ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ.
ದೇಶದಲ್ಲಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಿಂದ ಪ್ರತಿ ವರ್ಷ 4.30 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೂ, ತೆರಿಗೆ ಹಂಚಿಕೆಯಲ್ಲಿ ಕೇಂದ್ರವು ರಾಜ್ಯಕ್ಕೆ ದ್ರೋಹ ಮಾಡುತ್ತಿದೆ. ರಾಜ್ಯಗಳ ತೆರಿಗೆ ಹಂಚಿಕೆ ಕಡಿತದಿಂದಾಗಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ 62,098 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ. ಮಾತ್ರವಲ್ಲದೆ, ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಪಾಲನ್ನು 15ನೇ ಹಣಕಾಸು ಆಯೋಗವು 4.72%ನಿಂದ 3.64%ಗೆ ಕಡಿತ ಮಾಡಿದೆ. ಪರಿಣಾಮವಾಗಿ, ರಾಜ್ಯಕ್ಕೆ ಸುಮಾರು 73,600 ಕೋಟಿ ರೂ. ನಷ್ಟವಾಗಿದೆ ಎಂಬುದು ಕಠೋರ ಸತ್ಯ.
ಅಲ್ಲದೆ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಸುಮಾರು 36,000 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಬರ ಪರಿಹಾರಕ್ಕೆ ಎನ್‌ಡಿಆರ್‌ಎಫ್‌ನಿಂದ 18,172 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಮನವಿ ಮಾಡಿ ಆರು ತಿಂಗಳಾದರೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲೇ ಇಲ್ಲ. ಕೊನೆಗೆ, ಕೇಂದ್ರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ, ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಹೇಳಿದೆ.
ಕರ್ನಾಟಕಕ್ಕೆ ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ರಾಜ್ಯದ 25 ಬಿಜೆಪಿ ಸಂಸದರು, ಜೆಡಿಎಸ್‌ನ ಒಬ್ಬ ಸಂಸದ, ಪಕ್ಷೇತ್ರ ಸಂಸದೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ಇನ್ನು, ರಾಜ್ಯ ಬಿಜೆಪಿ ನಾಯಕರು ಕೇಂದ್ರದಿಂದ ಯಾವುದೇ ಅನ್ಯಾಯವೇ ಆಗಿಲ್ಲವೆಂದು ಸಮರ್ಥಿಸಿಕೊಂಡರು. ಮೊದಲಿಗೆ, ಕೇಂದ್ರದ ಅನ್ಯಾಯದ ವಿರುದ್ಧ ಮಾತನಾಡುತ್ತಿದ್ದ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಬಾಯಿಗೆ ಬೀಗ ಜಡಿದುಕೊಂಡಿತು. ಪ್ರಧಾನಿ ಮೋದಿ ಮತ್ತು ಅವರ ಧೋರಣೆಯನ್ನು ಜೆಡಿಎಸ್ ನಾಯಕರು ಸಮರ್ಥಿಸಿಕೊಂಡು, ಮೋದಿ ಅವರನ್ನು ಹೊಗಳಲು ಆರಂಭಿಸಿದರು.
ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಆರೋಪ-ಸಮರ್ಥನೆಗಳ ನಡುವೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಅನ್ಯಾಯದ ಬಗ್ಗೆ ರಾಜ್ಯದ ಜನರ ಅಭಿಪ್ರಾಯವೇನಿದೆ ಎಂಬುದನ್ನು ತಿಳಿಯಲು ಈ ದಿನ.ಕಾಮ್ ಸಮೀಕ್ಷೆಯಲ್ಲಿ ಪ್ರಯತ್ನಿಸಿತ್ತು. ಲೋಕಸಭಾ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆಯಲ್ಲಿ ಕೇಂದ್ರದ ಅನ್ಯಾಯದ ಬಗ್ಗೆ ಜನರನ್ನು ಕೇಳಲಾಯಿತು. ತೆರಿಗೆ ಹಂಚಿಕೆ ವಿಚಾರದಲ್ಲಿ ಬಿಜೆಪಿಯ ಸಮರ್ಥನೆ, ಜೆಡಿಎಸ್‌ನ ‘ಹೂಂ’ ಗುಡುವಿಕೆ, ಮೋದಿ ಪ್ರಭಾವದ ನಡುವೆಯೂ ಬಹುಸಂಖ್ಯಾತ ಜನರು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯ ಮಾಡಿದ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ
ಸಮೀಕ್ಷೆಯಲ್ಲಿ, “ತೆರಿಗೆಯಿಂದ ಸಂಗ್ರಹವಾದ ಹಣವನ್ನು ಕರ್ನಾಟಕ ಮತ್ತು ಇತರ ದಕ್ಷಿಣದ ರಾಜ್ಯಗಳಿಗೆ ಹಂಚಿಕೆ ಮಾಡುವಲ್ಲಿ ಕೇಂದ್ರ ಸರ್ಕಾರವು ನ್ಯಾಯಯುತವಾಗಿಲ್ಲ ಎಂಬ ಆರೋಪವಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕಡಿಮೆ ಹಣ ನೀಡುತ್ತಿದೆ ಎಂದು ನೀವು ಭಾವಿಸುತ್ತೀರಾ?” ಎಂದು ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆಗೆ ಉತ್ತರಿಸಿದವರಲ್ಲಿ ಹೆಚ್ಚು ಮಂದಿ, ಅಂದರೆ 41.87% ಜನರು ಅನ್ಯಾಯ ಆಗಿದೆ ಎಂದಿದ್ದಾರೆ. ಉಳಿದಂತೆ, 30.8% ಮಂದಿ ಗೊತ್ತಿಲ್ಲ ಎಂದಿದ್ದರೆ, 27.34% ಜನರು ಅನ್ಯಾಯವೇ ಆಗಿಲ್ಲ ಎಂದಿದ್ದಾರೆ.
ಅದರಲ್ಲೂ, ಈ ಪ್ರಶ್ನೆಗೆ ಉತ್ತರಿಸಿದವರಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ಅನ್ಯಾಯವಾಗಿದೆ ಎಂದಿದ್ದಾರೆ. 44.03% ಪುರುಷರು ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಹೇಳಿದ್ದರೆ, 29.06% ಪುರಷರು ಗೊತ್ತಿಲ್ಲ ಎಂದಿದ್ದಾರೆ. ಇನ್ನು, 26.91% ಪುರುಷರು ಅನ್ಯಾಯವಾಗಿಲ್ಲ ಎಂದಿದ್ದು, ಕೇಂದ್ರವನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಿಳೆಯರಲ್ಲಿ ಅನ್ಯಾಯ ಆಗಿದೆ ಎಂದವರ ಸಂಖ್ಯೆ ಹೆಚ್ಚಿದ್ದರೂ, ಗೊತ್ತಿಲ್ಲ ಎಂದವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ. 39.32% ಮಹಿಳೆಯರು ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಿದೆ ಎಂದಿದ್ದರೆ, 35.36% ಮಂದಿ ಗೊತ್ತಿಲ್ಲ ಎಂದಿದ್ದಾರೆ. 25.32% ಮಹಿಳೆಯರು ಅನ್ಯಾಯ ಆಗಿಲ್ಲ ಎಂದು ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಪೈಕಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗಿದೆಯೇ ಎಂಬ ಪ್ರಶ್ನೆಗೆ ಹೌದು/ಇಲ್ಲ/ಗೊತ್ತಿಲ್ಲ ಎಂದವರ ಶೇಕಡವಾರು ಪಟ್ಟಿ ಇಲ್ಲಿದೆ;
ಪ್ರಶ್ನೆಗೆ ಪ್ರತಿಕ್ರಿಯಿಸಿದ ಉದ್ಯೋಗಿಗಳಲ್ಲಿ ತಿಂಗಳಿಗೆ 10 ಸಾವಿರಕ್ಕೂ ಕಡಿಮೆ ಆದಾಯ ಗಳಿಸುತ್ತಿರುವ ವ್ಯಾಪಾರಿಗಳು, ಸರಿಸುಮಾರು 25 ಸಾವಿರ ರೂ. ಮತ್ತು ಅದಕ್ಕೂ ಸ್ವಲ್ಪ ಅಧಿಕ ಆದಾಯ ಗಳಿಸುತ್ತಿರುವ ವ್ಯಾಪಾರಿಗಳು ಹಾಗೂ ನಿರುದ್ಯೋಗಗಳು ಕರ್ನಾಟಕಕ್ಕೆ ಕೇಂದ್ರವು ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ.
ಆದರೆ, 50 ಸಾವಿರ ರೂ. ಮತ್ತು 1 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತಿರುವ ವ್ಯಾಪಾರಿಗಳು/ಸ್ವಉದ್ಯೋಗಿಗಳು ಹಾಗೂ 1 ಲಕ್ಷ ರೂ.ಗಳಿಗೆ ಅಧಿಕ ತಿಂಗಳ ಸಂಬಳ ಪಡೆಯುತ್ತಿರುವ ಉದ್ಯೋಗಿಗಳು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವೇ ಆಗಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಪ್ರತಿಕ್ರಿಯಿಸಿದ ಎಲ್ಲ ಉದ್ಯೋಗಿಗಳಲ್ಲಿ ಹೆಚ್ಚಿನವರು ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದೇ ಹೇಳಿದ್ದಾರೆ.
ವಿವಿಧ ಹಂತಗಳ ಶಿಕ್ಷಣ ಪಡೆದಿರುವವರು ಅಭಿಪ್ರಾಯಗಳ ಶೇಕಡಾವಾರು ಪಟ್ಟಿ;
ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಅಂದರೆ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದಿರುವವರು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಸ್ನಾತಕೋತ್ತರ ಪದವೀಧರರಲ್ಲಿ 49% ಮಂದಿ ಅನ್ಯಾಯ ಆಗಿದೆ ಎಂದೇ ಹೇಳಿದ್ದಾರೆ. ಅಂದಹಾಗೆ, ಎಂಬಿಬಿಎಸ್, ಬಿಟೆಕ್ ಎಲ್‌ಎಲ್‌ಬಿ ರೀತಿಯ ವೃತ್ತಿಪರ ಶಿಕ್ಷಣ ಪಡೆದವರಲ್ಲಿ ಹೆಚ್ಚಿನವರು ಅನ್ಯಾಯ ಆಗಿಲ್ಲವೆಂದು ಹೇಳಿರುವುದು ಗಮನಾರ್ಹ.
ರಾಜ್ಯಕ್ಕೆ ಅನ್ಯಾಯ ಆಗಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದವರ ವಯೋಮಾನ ಆಧಾರಿತ ವರ್ಗೀಕರಣ ಪಟ್ಟಿ;
ಎಲ್ಲ ವಯೋಮಾನದವರಲ್ಲಿ ಹೆಚ್ಚಿನವರು ಅನ್ಯಾಯ ಆಗಿದೆ ಎಂದೇ ಹೇಳಿದ್ದಾರೆ. ಆದರೆ, ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಗಿಲ್ಲವೆಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿರುವವರಲ್ಲಿ ಹೆಚ್ಚಿನವರು ಹೆಚ್ಚಿನ ಆದಾಯ, ವೃತ್ತಿಪರ ಶಿಕ್ಷಣ ಪಡೆದಿರುವವರು ಎಂಬುದು ಗಮನಿಸಬೇಕಾದ ಸಂಗತಿ. ಉತ್ತಮ ಜೀವನ ದೂಡುತ್ತಿರುವವರಿಗೆ ದೇಶದಲ್ಲಾಗುತ್ತಿರುವ ವಿದ್ಯಾಮಾನಗಳ ಅರಿವಿಲ್ಲ ಎಂಬುದು ಕಂಡುಬಂದಿದೆ.
ಅವರಲ್ಲಿ ಬಹುಸಂಖ್ಯಾತರು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ವೈರಲ್ ಆಗುವ ನರೇಟಿವ್ ಪೋಸ್ಟ್‌ಗಳಿಂದ ಪ್ರೇರಿತರಾಗಿದ್ದಾರೆ ಎಂಬುದು ಆತಂಕಕಾರಿ ಸಂಗತಿ. ಸುಳ್ಳು, ನಕಲಿ ಪೋಸ್ಟ್‌ಗಳ ಮೂಲಕ ಬಿಜೆಪಿ ಮತ್ತು ಸಂಘಪರಿವಾದ ಐಟಿ ಸೆಲ್‌ಗಳನ್ನು ಜನರನ್ನು ನಂಬಿಸಿ ಮೋಸ ಮಾಡುತ್ತಿವೆ. ಅಲ್ಲದೆ, ಮಾಧ್ಯಮಗಳೂ ಕೂಡ ತಮ್ಮ ಸುದ್ದಿ ವಾಹಿನಿಗಳಲ್ಲಿ ಹೆಚ್ಚಿನ ಸಮಯವನ್ನು ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಹೊಗಳುವುದಕ್ಕೇ ಸೀಮಿತಗೊಳಿಸಿದ್ದು, ಅದರಿಂದಾಗಿ ಕೇಂದ್ರ ಸರ್ಕಾರದಿಂದ ಯಾರಿಗೂ ಅನ್ಯಾಯವೇ ಆಗಿಲ್ಲ ಎಂಬಂತಹ ಸಂದೇಶವನ್ನ ಜನರಲ್ಲಿ ತುಂಬಲಾಗಿದೆ. ಆದರೆ, ಹೆಚ್ಚಿನ ಜನರು ಸತ್ಯವನ್ನು ಅರಿಯುತ್ತಿದ್ದಾರೆ. ಮೋದಿ ಸರ್ಕಾರ ಮತ್ತು ಬಿಜೆಪಿಯ ಅಸಲಿಯತ್ತನ್ನು ಅರ್ಥೈಸಿಕೊಂಡು ಮತದಾನಕ್ಕೆ ಮುಂದಾಗಿದ್ದಾರೆ ಎಂಬುದೂ ಕೂಡ ಕಾಣಿಸುತ್ತಿದೆ.