ಗಾಂಧೀಜಿಯ ಮೆಚ್ಚಿನ “ಈಶ್ವರ ಅಲ್ಲಾಹ್ ತೇರೋ ನಾಮ್” ಪ್ರಾರ್ಥನೆಗೂ ಇದೀಗ ಕೋಮುವಾದದ ಕುತ್ತು ಒದಗಿದೆ!
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದಂದು ಬಿಹಾರದ ಪಟನಾದ ಸಮಾರಂಭದಲ್ಲಿ, ಖ್ಯಾತ ಜಾನಪದ ಗಾಯಕಿ ದೇವಿ ಈ ಪ್ರಾರ್ಥನೆ ಹಾಡಿದಾಗ ಪ್ರತಿಭಟನೆ ಭುಗಿಲೆದ್ದಿದೆ.
“ರಘುಪತಿ ರಾಘವ್ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾಹ್ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್…” ಎಂಬ ಭಜನೆಯಿದು.
ಅಲ್ಲಾಹ್ ಪದವನ್ನುಒಳಗೊಂಡಿರುವ ಕಾರಣ ಭಜನೆಯನ್ನು ನಿಲ್ಲಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕ ಮತ್ತು ವಾಜಪೇಯಿ ಮಂತ್ರಿಮಂಡಲದ ಮಾಜಿ ಸಚಿವ ಶಾಹ್ ನವಾಜ್ ಹುಸೇನ್, ಈ ಅಡ್ಡಿಯನ್ನು “ಅಸಹಿಷ್ಣುತೆಯ ಪರಮಾವಧಿ” ಎಂದು ಖಂಡಿಸಿದ್ದಾರೆ.
ಪಟನಾದ ಬಾಪು ಸಭಾಗಾರದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವರು ಕೇಂದ್ರದ ಮಾಜಿ ಸಚಿವ ಅಶ್ವಿನಿ ಕುಮಾರ್ ಚೌಬೆ.
ನಡೆಯಬಾರದಾಗಿದ್ದ ಘಟನೆಯಿದು ಎಂಬುದು ಚೌಬೆ ಪ್ರತಿಕ್ರಿಯೆ.
“ಮೇಂ ಅಟಲ್ ರಹೂಂಗಾ” ಹೆಸರಿನ ಈ ಕಾರ್ಯಕ್ರಮದಲ್ಲಿ ಚೌಬೆಯವರಲ್ಲದೆ ವಾಜಪೇಯಿ ಸರ್ಕಾರದಲ್ಲಿ ಸಚಿವರುಗಳಾಗಿದ್ದ ಡಾ ಸಿ ಪಿ ಠಾಕೂರ್, ಸಂಜಯ್ ಪಾಸ್ವಾನ್ ಮತ್ತು ಶಾನವಾಜ್ ಹುಸೇನ್ ಅವರೂ ಇದ್ದರು.
“ನಾನು ʼಈಶ್ವರ ಅಲ್ಲಾಹ್ ತೇರೋ ನಾಮ್ʼ ಎಂಬ ಚರಣವನ್ನು ಹಾಡಲು ಪ್ರಾರಂಭಿಸಿದಾಗ, ಪ್ರೇಕ್ಷಕರ ಒಂದು ವರ್ಗ ಪ್ರತಿಭಟಿಸಿತು. ತಕ್ಷಣ ಹಾಡನ್ನು ನಿಲ್ಲಿಸಬೇಕಾಗಿ ಬಂತು. ಅಶ್ವಿನಿ ಕುಮಾರ್ ಚೌಬೆ ಅವರು ಗುಂಪನ್ನು ಸಮಾಧಾನಪಡಿಸಿದ ನಂತರ, ಛಠ್ ಪೂಜಾ ಹಾಡನ್ನು ಹಾಡಿದೆ … ಆದರೆ ಗಾಂಧೀಜಿಯವರ ಮೆಚ್ಚಿನ ಭಜನೆಯ ವಿರುದ್ಧದ ಪ್ರತಿಭಟನೆ ದುರದೃಷ್ಟಕರʼʼ ಎಂದು ಗಾಯಕಿ ದೇವಿ ಹೇಳಿದ್ದಾರೆ.
“ನನ್ನ ಭಾಷಣದಲ್ಲಿ ಅಟಲ್ ಜಿ ಅವರನ್ನು ಉಲ್ಲೇಖಿಸಿದ್ದೆ. ‘ಛೋಟೆ ದಿಲ್ ಸೆ ಕೋಯಿ ಬಡಾ ನಹೀ ಹೋತಾ (ಹೃದಯವಂತಿಕೆ ಇಲ್ಲದವರು ದೊಡ್ಡವರಾಗುವುದಿಲ್ಲ)’ ಎಂದು ಅಟಲ್ ಜೀ ಹೇಳುತ್ತಿದ್ದರು. ಭಜನೆಯ ಪ್ರತಿಭಟನೆ ಅಸಹಿಷ್ಣುತೆಯ ಪರಮಾವಧಿ ಎಂದು ವಾಜಪೇಯಿ ಅವರ ಕ್ಯಾಬಿನೆಟ್ ನ ಅತ್ಯಂತ ಕಿರಿಯ ಸಹೋದ್ಯೋಗಿಯಾಗಿದ್ದ ಶಾನವಾಜ್ ಹುಸೇನ್ ಹೇಳಿದರು.
“ಭಜನಾ ವಿರುದ್ಧದ ಪ್ರತಿಭಟನೆಯನ್ನು ಒಪ್ಪಲಾಗದು. ನಾವು ‘ಗ್ಲಾಡ್’ (ಗಾಂಧಿ, ಲೋಹಿಯಾ, ಅಂಬೇಡ್ಕರ್ ಮತ್ತು ದೀನದಯಾಳ್ ಉಪಾಧ್ಯಾಯ) ಅವರ ಸಮನ್ವಯ ಸಿದ್ಧಾಂತಗಳ ಜಗತ್ತಿನಲ್ಲಿ ಬದುಕಿದ್ದೇವೆ ಎಂಬುದನ್ನು ಮರೆಯಬಾರದು” ಎಂದು ಬಿಜೆಪಿಯ ಸಂಜಯ ಪಾಸ್ವಾನ್ ಹೇಳಿದರು.