2019ರ ಏಪ್ರಿಲ್ 12ಕ್ಕಿಂತ ಮೊದಲು ಮಾರಾಟವಾಗಿದ್ದ ಮತ್ತು ನಗದೀಕರಿಸಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗವು ಮಾರ್ಚ್ 17ರಂದು ಪ್ರಕಟಿಸಿದೆ. ಈ ಹೊಸ ಅಂಕಿಅಂಶಗಳಲ್ಲಿ 2018ರ ಮಾರ್ಚ್ 9ರಿಂದ 2019ರ ಏಪ್ರಿಲ್ 11ರ ನಡುವೆ ಬಿಜೆಪಿ ಬರೋಬ್ಬರಿ 2,658.35 ಕೋಟಿ ರೂ.ಗಳನ್ನು ಬಾಂಡ್ ಮೂಲಕ ಪಡೆದುಕೊಂಡಿದೆ. ಅಂದರೆ, ಈ ಅವಧಿಯಲ್ಲಿ ಕಂಪನಿಗಳು ಖರೀದಿಸಿದ ಒಟ್ಟು ಬಾಂಡ್‌ಗಳ ಮೊತ್ತದಲ್ಲಿ 66% ಹಣವು ಬಿಜೆಪಿ ಪಾಲಾಗಿದೆ.
ಬಿಜೆಪಿ ಬರೋಬ್ಬರಿ 2,658.35 ಕೋಟಿ ರೂ. ಪಡೆದಿದ್ದರೆ, ಕಾಂಗ್ರೆಸ್ 530.1 ಕೋಟಿ ರೂ.ಗಳನ್ನು ಪಡೆದಿದೆ. ಟಿಎಂಸಿ 97.28 ಕೋಟಿ ರೂ. ಮತ್ತು ಬಿಜೆಡಿ 239 ಕೋಟಿ ರೂ. ಪಡೆದುಕೊಂಡಿವೆ.
ಈ ಹಿಂದೆ, ಎಸ್‌ಬಿಐ ಒದಗಿಸಿದ್ದ 2019ರ ಏಪ್ರಿಲ್ 12ರಿಂದ 2024ರ ಜನವರಿವರೆಗೆ ಮಾರಾಟವಾದ ಮತ್ತು ನಗದೀಕರಿಸಿದ ಚುನಾವಣಾ ಬಾಂಟ್‌ಗಳ ಮಾಹಿತಿಯನ್ನು ಮಾರ್ಚ್ 14ರಂದು ಚುನಾವಣಾ ಆಯೋಗ ಪ್ರಕಟಿಸಿತ್ತು. ಆದರೆ, 2019ರ ಏಪ್ರಿಲ್ 12ಕ್ಕೂ ಹಿಂದಿನ ಮಾಹಿತಿಯನ್ನೂ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ, ಎಲ್ಲ ರಾಜಕೀಯ ಪಕ್ಷಗಳು ತಾವು ಪಡೆದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ನೀಡಿವೆ.
ಈ ಎರಡೂ ಮಾಹಿತಿಯನ್ನು ಒಟ್ಟುಗೂಡಿಸಿದಂತೆ 2018ರ ಮಾರ್ಚ್‌ನಿಂದ 2024ರ ಜನವರಿವರೆಗೆ ವಿವಿಧ ರಾಜಕೀಯ ಪಕ್ಷಗಳು ಸ್ವೀಕರಿಸಿದ ಒಟ್ಟು ಹಣದ ಮೊತ್ತ ಹೀಗಿದೆ:
ಬಿಜೆಪಿ – ಒಟ್ಟು 8,718.85 ಕೋಟಿ ರೂ. ಪಡೆದಿದೆ. (2019ರ ಏಪ್ರಿಲ್ 12ಕ್ಕೂ ಮೊದಲು ಸ್ವೀಕರಿಸಿದ್ದು 2,658.35 ಕೋಟಿ ರೂ. ಮತ್ತು 2019ರ ಏಪ್ರಿಲ್ 12ರ ನಂತರ ಪಡೆದದ್ದು 6,060.5 ಕೋಟಿ ರೂ.)
ಕಾಂಗ್ರೆಸ್ – ಒಟ್ಟು 1,864.45 ಕೋಟಿ ರೂ. ಪಡೆದಿದೆ. (2019ರ ಏಪ್ರಿಲ್ 12ಕ್ಕೂ ಮೊದಲು ಸ್ವೀಕರಿಸಿದ್ದು 530.1 ಕೋಟಿ ರೂ. ಮತ್ತು 2019ರ ಏಪ್ರಿಲ್ 12ರ ನಂತರ ಪಡೆದದ್ದು 1,334.35 ಕೋಟಿ ರೂ.)
ತೃಣಮೂಲ ಕಾಂಗ್ರೆಸ್ (ಟಿಎಂಸಿ) – ಒಟ್ಟು 1,494.28 ಕೋಟಿ ರೂ. ಪಡೆದಿದೆ. (2019ರ ಏಪ್ರಿಲ್ 12ಕ್ಕೂ ಮೊದಲು 97.28 ಕೋಟಿ ರೂ. ಸ್ವೀಕರಿಸಿದೆ ಮತ್ತು 2019ರ ಏಪ್ರಿಲ್ 12ರ ನಂತರ 1,397 ಕೋಟಿ ರೂ. ಪಡೆದುಕೊಂಡಿದೆ)
ಬಿಜು ಜನತಾ ದಳ (ಬಿಜೆಡಿ) – ಚುನಾವಣಾ ಬಾಂಡ್‌ಗಳಲ್ಲಿ ಒಟ್ಟು 1,183.5 ಕೋಟಿ ರೂ. ಪಡೆದಿದೆ. (2019ರ ಏಪ್ರಿಲ್ 12ಕ್ಕೂ ಮೊದಲು 239 ಕೋಟಿ ರೂ. ಮತ್ತು 2019ರ ಏಪ್ರಿಲ್ 12ರ ಬಳಿಕ 944.5 ಕೋಟಿ ರೂ. ಪಡೆದಿದೆ.)
ಹಲವಾರು ಮಾಹಿತಿ ಹಕ್ಕು (ಆರ್‌ಟಿಐ) ಪ್ರತಿಕ್ರಿಯೆಗಳ ಪ್ರಕಾರ, 2018ರ ಮಾರ್ಚ್‌ನಿಂದ 2014ರ ಜನವರಿವರೆಗೆ ಎಸ್‌ಬಿಐ 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಈ ಹಿಂದೆ, 2019ರ ಏಪ್ರಿಲ್ 12ರ ನಂತರ ಮಾರಾಟವಾಗಿದ್ದ 12,516 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಎಸ್‌ಬಿಐ ನೀಡಿತ್ತು. ಅದನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಅಂದರೆ, 2019ರ ಮಾರ್ಚ್‌ನಿಂದ 2019ರ ಏಪ್ರಿಲ್ 12ರವರೆಗೆ 4,002 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮಾರಾಟ ಮಾಡಿದೆ. ಅದರಲ್ಲಿ ಬಿಜೆಪಿ ಬರೋಬ್ಬರಿ 2,658.35 ಕೋಟಿ ರೂ. (66%) ಮೌಲ್ಯದ ಬಾಂಡ್‌ಗಳನ್ನು ಪಡೆದುಕೊಂಡಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | 2019ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಣ ಕೊಟ್ಟ ಕಂಪನಿಗಳಿವು!
2019ರ ಏಪ್ರಿಲ್ ಹಿಂದೆ ಮತ್ತು ಏಪ್ರಿಲ್ ನಂತರದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಒಟ್ಟು ದೇಣಿಗೆ 8,718.85 ಕೋಟಿ ರೂಪಾಯಿಗಳು. ಇದು ಚುನಾವಣಾ ಬಾಂಡ್‌ನ ಒಟ್ಟು ಮೊತ್ತ 16,518 ರೂ.ಗಳ ಪೈಕಿ, 50% ಆಗಿದೆ.