ಹಗರಣವೆಂದೇ ಪರಿಗಣಿಸಲಾಗಿರುವ, ಸುಪ್ರೀಂ ಕೋರ್ಟ್ ಅಸಂವಿಧಾನಿಕವೆಂದು ಕರೆದಿರುವ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಬಾಂಡ್‌ಗಳ ಪೂರ್ಣ ಮಾಹಿತಿ ಹಾಗೂ ಬಾಂಡ್ ಖರೀದಿಸಿದವರು ಮತ್ತು ಪಡೆದವರ ನಡುವಿನ ಸಂಬಂಧದ ಬಗ್ಗೆ ಎಸ್‌ಬಿಐ ಮಾಹಿತಿ ಒದಗಿಸಿಲ್ಲವಾದರೂ, ಯಾರು ಎಷ್ಟು ಬಾಂಡ್‌ಗಳನ್ನು ಖರೀದಿಸಿದ್ದಾರೆ ಮತ್ತು ಯಾವ ಪಕ್ಷಗಳು ಬಾಂಡ್‌ಗಳಿಂದ ಎಷ್ಟು ಹಣ ಪಡೆದಿವೆ ಎಂಬ ಮಾಹಿತಿ ಸದ್ಯಕ್ಕೆ ದೇಶದ ಮುಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, 2019ರಿಂದ ಈವರೆಗೆ ಬರೋಬ್ಬರಿ 1,300ಕ್ಕೂ ಹೆಚ್ಚು ಕಂಪನಿಗಳು ಮತ್ತು ವ್ಯಕ್ತಿಗಳು ಒಟ್ಟು 12,155 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಈ ಬಾಂಡ್‌ಗಳ ಪೈಕಿ ಬಹುಪಾಲನ್ನು ಬಿಜೆಪಿಯೇ ನಗದೀಕರಿಸಿಕೊಂಡಿದೆ. ಬಿಜೆಪಿಯು 6,060.50 ಕೋಟಿ ರೂ. ಅಂದರೆ, ಬಾಂಡ್‌ಗಳ ಒಟ್ಟು ಮೊತ್ತದಲ್ಲಿ ಶೇ. 47.46ರಷ್ಟು ದೇಣಿಗೆ ಪಡೆದಿದೆ.
ಅಂದಹಾಗೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಹಲವು ಕಂಪನಿಗಳು, ತಾವು ಬಾಂಡ್‌ಗಳನ್ನು ಖರೀದಿ ಮಾಡಿದ ಕಲವೇ ದಿನಗಳಲ್ಲಿ ಪ್ರಯೋಜನಗಳನ್ನು ಪಡೆದಿರುವುದು ಕೂಡ ಕಂಡುಬಂದಿದೆ. ಅಂತಹ ಕಂಪನಿಗಳು ಬೃಹತ್ ಮೊತ್ತದ ಯೋಜನೆಗಳ ಟೆಂಡರ್‌ಗಳನ್ನು ಪಡೆದಿವೆ. ಅಲ್ಲದೆ, ಕೆಲವು ಕಂಪನಿಗಳು ತಮ್ಮ ಮೇಲೆ ಇಡಿ, ಐಟಿ ದಾಳಿಗಳು ನಡೆದ ಬಳಿಕ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ಎಂದು ತಿಳಿದುಬಂದಿದೆ.
ತಮ್ಮ ಮೇಲಿನ ದಾಳಿ ಬಳಿಕ ದೇಣಿಗೆ ನೀಡಿರುವ ಕಂಪನಿಗಳು
ಹೆಟೆರೊ ಫಾರ್ಮಾ ಮತ್ತು ಯಶೋದಾ ಆಸ್ಪತ್ರೆಯಂತಹ ಅನೇಕ ಕಂಪನಿಗಳ ಮೇಲೆ ಇಡಿ, ಐಟಿ, ಸಿಬಿಐ ದಾಳಿಗಳು ನಡೆದ ಬಳಿಕ ಆ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಹೆಚ್ಚು ಬಾಂಡ್‌ಗಳನ್ನು ಖರೀದಿಸಿದ 30 ಕಂಪನಿಗಳ ಪೈಕಿ 14 ಕಂಪನಿಗಳು ತಮ್ಮ ಮೇಲೆ ಮೇಲೆ ಇಡಿ, ಸಿಬಿಐ, ಐಟಿ ದಾಳಿ ನಡೆದ ಬಳಿಕ ಖರೀದಿ ಮಾಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಕೇಂದ್ರ ಸರ್ಕಾರದ ಹಫ್ತಾ ವಸೂಲಿ’ ಎಂದು ಬಣ್ಣಸಿದ್ದಾರೆ. ”ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಕಂಪನಿ ಮತ್ತು ವ್ಯಕ್ತಿಗಳನ್ನು ಬೆದರಿಸಿದೆ. ಆ ಬಳಿಕ, ಆ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ಬಿಜೆಪಿಗೆ ದೇಣಿಗೆ ನೀಡಿವೆ” ಎಂದು ಆರೋಪಿಸಿದ್ದಾರೆ.
ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ಸ್ ಲಿಮಿಟೆಡ್, ಎಂಬ ಕಂಪನಿ 1,200 ಕೋಟಿ ರೂ. ಮೌಲ್ಯದ ಬಾಂಡ್ ಖರೀದಿಸುವ ಮೂಲಕ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಕಂಪನಿಯ ಮೇಲೆ 2022ರ ಏಪ್ರಿಲ್ 2ರಂದು ಇಡಿ ದಾಳಿ ನಡೆದಿತ್ತು. ಇದಾದ, 5 ದಿನಗಳ ನಂತರ, ಅಂದರೆ 2022ರ ಏಪ್ರಿಲ್ 7ರಂದು ಕಂಪನಿಯು ಚುನಾವಣಾ ಬಾಂಡ್ ಮೂಲಕ 100 ಕೋಟಿ ರೂ. ದೇಣಿಗೆ ನೀಡಿದೆ.
ಇದೇ ಕಂಪನಿ ಮೇಲೆ ಮತ್ತೆ 2023ರ ಅಕ್ಟೋಬರ್‌ನಲ್ಲಿ ಐಟಿ ಇಲಾಖೆ ದಾಳಿ ನಡೆಸಿದ್ದು, ಅದೇ ತಿಂಗಳು ಕಂಪನಿಯು ಚುನಾವಣಾ ಬಾಂಡ್ ಮೂಲಕ 65 ಕೋಟಿ ರೂ. ದೇಣಿಗೆ ನೀಡಿದೆ.
ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಮೇಲೆ 2023ರ ಡಿಸೆಂಬರ್‌ನಲ್ಲಿ ಆದಾಯ ತೆರಿಗೆ (ಐಟಿ) ದಾಳಿ ನಡೆಸಿತ್ತು. ಅದಾದ ಬಳಿಕ, ಈ ಕಂಪನಿ 2024ರ ಜನವರಿಯಲ್ಲಿ 40 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿ, ದೇಣಿಗೆ ನೀಡಿದೆ.
ದೇಣಿಗೆ ಕೊಟ್ಟು ಪ್ರತಿಫಲ ಪಡೆದಿರುವ ಕಂಪನಿಗಳು
ದೇಣಿಗೆ ಕೊಟ್ಟ ಕೆಲವೇ ದಿನಗಳಲ್ಲಿ ಪ್ರತಿಫಲ ಪಡೆದ ಕಂಪನಿಗಳಲ್ಲಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯೂ ಒಂದಾಗಿದೆ. ಈ ಕಂಪನಿ 966 ಕೋಟಿ ರೂ. ಮೌಲ್ಯದ ಬಾಂಡ್ ಖರೀದಿಸಿದೆ. ಅಲ್ಲದೆ, 2023ರ ಏಪ್ರಿಲ್‌ನಲ್ಲಿ 140 ಕೋಟಿ ರೂ. ಮೌಲ್ಯದ ಬಾಂಡ್‌ಗಳ ಖರೀದಿಸಿದ್ದ ಈ ಕಂಪನಿ, ಅದಾದ ಒಂದೇ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯ ಗುತ್ತಿಗೆ ಪಡೆದುಕೊಂಡಿದೆ. ಹೀಗಾಗಿ, ಈ ಕಂಪನಿ ತನ್ನ ಹೆಚ್ಚಿನ ದೇಣಿಗೆಯನ್ನು ಬಿಜೆಪಿಗೆ ಕೊಟ್ಟಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ ಪ್ರಯೋಜನ ಪಡೆದ ಮತ್ತೊಂದು ಕಂಪನಿ, ‘ಜಿಂದಾಲ್ ಸ್ಟೀಲ್ & ಪವರ್’. ಈ ಕಂಪನಿ 2022ರ ಅಕ್ಟೋಬರ್ 7ರಂಂದು 25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿತ್ತು. ಇದಾಗಿ ಕೇವಲ ಮೂರು ದಿನಗಳ ಬಳಿಕ, ಅಂದರೆ 2022ರ ಅಕ್ಟೋಬರ್ 10ರಂದು ಗರೇ ಪಾಲ್ಮಾ IV/6 ಕಲ್ಲಿದ್ದಲು ಗಣಿಯನ್ನು ತನ್ನ ಪಾಲಿಗೆ ತೆಗೆದುಕೊಂಡಿದೆ.
ವೇದಾಂತ ಕಂಪನಿಯು 3 ಮಾರ್ಚ್ 2021ರಂದು ರಾಧಿಕಪೂರ್ ವೆಸ್ಟ್ ಖಾಸಗಿ ಕಲ್ಲಿದ್ದಲು ಗಣಿಯನ್ನು ತನ್ನದಾಗಿಸಿಕೊಂಡಿತ್ತು. ಇದಾಗಿ ಒಂದು ತಿಂಗಳ ನಂತರ ಏಪ್ರಿಲ್ 2021ರಲ್ಲಿ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ 25 ಕೋಟಿ ರೂ. ದೇಣಿಗೆ ನೀಡಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಬಾಂಡ್‌ಗಳ ಖರೀದಿ ಮೊತ್ತಕ್ಕಿಂತ ನಗದೀಕರಿಸಿದ ಹಣದ ಮೊತ್ತವೇ ಹೆಚ್ಚು; ಯಾಕೆ ಈ ವ್ಯತ್ಯಾಸ?
ಮೇಘಾ ಇಂಜಿನಿಯರಿಂಗ್ ಕಂಪನಿಯು ಆಗಸ್ಟ್ 2020ರಲ್ಲಿ 4,500 ಕೋಟಿ ರೂ. ವೆಚ್ಚದ ಜೊಜಿಲಾ ಸುರಂಗ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು. ಅಕ್ಟೋಬರ್ 2020ರಲ್ಲಿ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ 20 ಕೋಟಿ ರೂ. ದೇಣಿಗೆ ನೀಡಿದೆ.
ಮೇಘಾ ಕಂಪನಿಯು ಡಿಸೆಂಬರ್ 2022ರಲ್ಲಿ ಬಿಕೆಸಿ ಬುಲೆಟ್ ರೈಲು ನಿಲ್ದಾಣದ ಗುತ್ತಿಗೆಯನ್ನು ಪಡೆದಿತ್ತು. ಅದೇ ತಿಂಗಳು ಕಂಪನಿ 56 ಕೋಟಿ ರೂ. ದೇಣಿಗೆ ನೀಡಿದೆ.
ತಮ್ಮ ಆದಾಯವನ್ನೂ ಮೀರಿ ದೇಣಿಗೆ ಕೊಟ್ಟಿರುವ ಕಂಪನಿಗಳು
ಕೆಲವು ಕಂಪನಿಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಬಾಂಡ್‌ಗಳನ್ನು ಖರೀದಿಸಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ. ಬಾಂಡ್ ಮೂಲಕ ಪಕ್ಷಗಳಿಗೆ ಹೆಚ್ಚು ಹಣ ನೀಡಿದ ಕಂಪನಿಗಳಲ್ಲಿ ‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಮೂರನೇ ಸ್ಥಾನದಲ್ಲಿದೆ. ಈ ಕಂಪನಿ ಕಡಿಮೆ ಪ್ರಸಿದ್ದಿ ಪಡೆದಿದ್ದರೂ, ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 410 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ ಆದಾಯ ಬರೋಬ್ಬರಿ 95 ಪಟ್ಟು ಕಡಿಮೆಯಿದೆ.
ಕಂಪನಿಯು 2021-22ರ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 360 ಕೋಟಿ ರೂಪಾಯಿಗಳನ್ನು ನೀಡಿದೆ. ಅದೇ ವರ್ಷದಲ್ಲಿ ಅದರ ನಿವ್ವಳ ಲಾಭ ಕೇವಲ 21.72 ಕೋಟಿ ರೂ. ಇತ್ತು. 2023-24ರ ಆರ್ಥಿಕ ವರ್ಷದಲ್ಲಿ ಕಂಪನಿಯು ಇನ್ನೂ 50 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅಂದಹಾಗೆ, ಈ ಕಂಪನಿ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಜೊತೆಗೆ ಸಂಬಂಧ ಹೊಂದಿದೆ ಎಂದು ತಿಳಿದುಬಂದಿದೆ.
ಈ ಕಂಪನಿ ಮಾತ್ರವಲ್ಲದೆ, ದೇಣಿಗೆ ನೀಡಿದವರಲ್ಲಿ ಮೊದಲ ಸ್ಥಾನದಲ್ಲಿರುವ ‘ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್’ ಕಂಪನಿ 1,368 ಕೋಟಿ ರೂ.ಗಳನ್ನು ಪಕ್ಷಗಳಿಗೆ ದೇಣಿಗೆ ನೀಡಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 215 ಕೋಟಿ ರೂ. ಮಾತ್ರ ಇದೆ. ಅಂದರೆ, ಈ ಕಂಪನಿಯು ತನ್ನ ಆದಾಯಕ್ಕಿಂತ 635% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.
ಅದೇ ರೀತಿ, ಎಂಕೆಜೆ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯು 192 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆದರೆ, ಈ ಕಂಪನಿಯ 2019-23ರವರೆಗಿನ ಆದಾಯ ಕೇವಲ 58 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ತನ್ನ ಆದಾಯಕ್ಕಿಂತ 329% ಅಧಿಕ ಮೊತ್ತವನ್ನು ದೇಣಿಗೆ ನೀಡಿದೆ.
ಮದನ್‌ಲಾಲ್ ಲಿಮಿಟೆಡ್ ಎಂಬ ಕಂಪನಿಯು 185 ರೂ. ದೇಣಿಗೆ ನೀಡಿದ್ದು, ಈ ಕಂಪನಿಯ ಆದಾಯ 10 ಕೋಟಿ ರೂ. ಮಾತ್ರವೇ ಇದೆ. ಈ ಕಂಪನಿ ಬರೋಬ್ಬರಿ 1,874% ಹೆಚ್ಚು ಹಣವನ್ನು ದೇಣಿಗೆಯಾಗಿ ಪಕ್ಷಗಳಿಗೆ ನೀಡಿದೆ.
ಇದಷ್ಟೇ ಅಲ್ಲದೆ, ಚುನಾವಣಾ ಬಾಂಡ್ ಯೋಜನೆಯಿಂದಾಗಿ ಕಲವು ಕಂಪನಿಗಳು ತಮ್ಮ ಕಪ್ಪು ಹಣವನ್ನು ದೇಣಿಗೆ ನೀಡಲು ಅನುವು ಮಾಡಿಕೊಟ್ಟಿದೆ ಎಂದೂ ಆರೋಪಿಸಲಾಗಿದೆ.
2018ರ ಮಾಹಿತಿಯ ನೀಡದ ಎಸ್‌ಬಿಐ
ಚುನಾವಣಾ ಬಾಂಡ್‌ಗಳ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದಾಗ್ಯೂ, 2018ರಲ್ಲಿ ಚುನಾವಣಾ ಬಾಂಡ್ ಖರೀದಿಸಿದವರು ಮತ್ತು ಆಗ ನಗದೀಕರಿಸಿದ ರಾಜಕೀಯ ಪಕ್ಷಗಳ ಮಾಹಿತಿಯನ್ನು ಎಸ್‌ಬಿಐ ಒದಗಿಸಿಲ್ಲ. ಕೇವಲ 2019ರ ಏಪ್ರಿಲ್ ನಂತರದ ಮಾಹಿತಿಯನ್ನು ಮಾತ್ರ ನೀಡಿದೆ.
2018ರ ಮಾರ್ಚ್‌ನಲ್ಲಿ ಮೊದಲ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮಾರಾಟ ಮಾಡಿದೆ. 2018ರ ಮಾರ್ಚ್‌ನಿಂದ 2019ರ ಏಪ್ರಿಲ್‌ವರೆಗೆ 2,500 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದ್ದು, ಆ ಬಾಂಡ್‌ಗಳು ಕಾಣೆಯಾಗಿವೆ ಎಂದು ಹೇಳಲಾಗಿದೆ.
ಈ ವಿಚಾರದಲ್ಲಿ ಬಿಜೆಪಿ ಮತ್ತು ಎಸ್‌ಬಿಐ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆಯೇ ಎಂದು ಅನುಮಾನಿಸಿರುವ ಜೈರಾಮ್ ರಮೇಶ್, ”2019ರ ಏಪ್ರಿಲ್ ಹಿಂದಿನ ಕಾಣೆಯಾದ ಬಾಂಡ್‌ಗಳ ಡೇಟಾ ಎಲ್ಲಿದೆ? ಉದಾಹರಣೆಗೆ, ಬಾಂಡ್‌ಗಳ ಮೊದಲ ಕಂತಿನಲ್ಲಿ ಬಿಜೆಪಿ ಶೇ.95 ಹಣವನ್ನು ಪಡೆದುಕೊಂಡಿದೆ. ಬಿಜೆಪಿ-ಎಸ್‌ಬಿಐ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ?” ಎಂದಿದ್ದಾರೆ.
Here’s a quick first analysis of the Electoral Bonds data disclosure that the SBI put up last night, after weeks of attempting to postpone it until after the election:
•Over 1,300 companies and individuals have donated electoral bonds, including over 6,000 crores to the BJP…
— Jairam Ramesh (@Jairam_Ramesh) March 15, 2024
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 1,260 ಕಂಪನಿಗಳು ಹಾಗೂ ವ್ಯಕ್ತಿಗಳು 12,769 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದು, ಇದರಲ್ಲಿ ಅಗ್ರ 20 ಕಂಪನಿಗಳ ಪಾಲು 5,945 ಕೋಟಿ ರೂಪಾಯಿ. ಅಂದರೆ ಒಟ್ಟು ಮೌಲ್ಯದ ಸುಮಾರು ಶೇಕಡ 50ರಷ್ಟು.
ದೇಣಿಗೆ ನೀಡಿದ ಸುಮಾರು 500 ಕಂಪನಿಗಳ ಪೈಕಿ 28 ಕಂಪನಿಗಳು 2019ರ ಏಪ್ರಿಲ್ 12ರ ಬಳಿಕ ಸ್ಥಾಪನೆಯಾದ ಕಂಪನಿಗಳು. 20 ಅಗ್ರ ಖರೀದಿದಾರ ಕಂಪನಿಗಳ ಪೈಕಿ 13 ಕಂಪನಿಗಳ ಹಣಕಾಸು ಫಲಿತಾಂಶ ಲಭ್ಯವಿದ್ದು, ತಮ್ಮ ನಿವ್ವಳ ಲಾಭದ ಪ್ರಮಾಣಾನುಸಾರ ಈ ಕಂಪನಿಗಳು ಬಾಂಡ್ ಖರೀದಿಸಿವೆ.