ಬಿಹಾರ ವಿಧಾನಸಭೆಯ ವಿಪಕ್ಷ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಮತದಾರರ ಗುರುತಿನ ಚೀಟಿ ಸಂಖ್ಯೆ ನಕಲಿ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸಿದೆ. ಹಾಗೆಯೇ 2025ರ ಆಗಸ್ಟ್ 16ರ ಸಂಜೆ ಐದು ಗಂಟೆಯೊಳಗೆ ಪರಿಶೀಲನೆಗಾಗಿ ತಮ್ಮ ಮೂಲ ಮತದಾರರ ಫೋಟೋ ಗುರುತಿನ ಚೀಟಿ (EPIC) ಯನ್ನು ಸಲ್ಲಿಸುವಂತೆ ಇಸಿಐ ತಿಳಿಸಿದೆ.
ಈ ಸಂಬಂಧ ಪಟನಾ ಸದರ್‌ನ ಉಪ-ವಿಭಾಗಾಧಿಕಾರಿ (ಎಸ್‌ಡಿಒ) ಆಗಿರುವ ದಿಘಾ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ತೇಜಸ್ವಿಗೆ ನೋಟಿಸ್ ನೀಡಿದ್ದಾರೆ. ತೇಜಸ್ವಿ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ EPIC ಸಂಖ್ಯೆ – RAB2916120 – ಚುನಾವಣಾ ಆಯೋಗದ ಡೇಟಾಬೇಸ್ ಜೊತೆ ಹೊಂದಿಕೆಯಾಗದ ಕಾರಣ ಆ ಮತದಾರರ ಗುರುತಿನ ಚೀಟಿ ನಕಲಿ, ಅನಧಿಕೃತ ಎಂದು ಇಆರ್‌ಒ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತೇಜಸ್ವಿ ಯಾದವ್‌ಗೆ ಎರಡು ಮತದಾರರ ಗುರುತಿನ ಚೀಟಿ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನಕಲಿ ಸರ್ಕಾರಿ ದಾಖಲೆಗಳನ್ನು ರಚಿಸುವುದು ಅಥವಾ ಬಳಸುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಹಾಗೆಯೇ ಈ ನಕಲಿ ಕಾರ್ಡ್ ಅನ್ನು ನಿಗದಿತ ದಿನದೊಳಗೆ ಇಆರ್‌ಒ ಕಚೇರಿಗೆ ಸಲ್ಲಿಸುವಂತೆ ತೇಜಸ್ವಿ ಅವರಿಗೆ ಹೇಳಲಾಗಿದೆ.
2015 ಮತ್ತು 2020ರಲ್ಲಿ ರಾಘೋಪುರ ವಿಧಾನಸಭಾ ಸ್ಥಾನಕ್ಕೆ ತೇಜಸ್ವಿ ಸಲ್ಲಿಸಿದ ನಾಮಪತ್ರಗಳಲ್ಲಿ ಅವರ EPIC ಸಂಖ್ಯೆ RAB0456228 ಎಂದು ದಾಖಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆ ವೇಳೆಯೂ ಇದೇ ಸಂಖ್ಯೆ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಆಗಸ್ಟ್ 2ರ ಪತ್ರಿಕಾಗೋಷ್ಠಿಯಲ್ಲಿ (RAB2916120) ಅವರು ಪ್ರದರ್ಶಿಸಿದ EPIC ಸಂಖ್ಯೆ ಬೇರೆಯೇ ಆಗಿದೆ. ಇದು ನಕಲಿ ಕಾರ್ಡ್ ಎಂಬ ಅನುಮಾನವಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಈ ಹಿಂದೆ, ಆಗಸ್ಟ್ 1ರಂದು ಬಿಡುಗಡೆಯಾದ ಹೊಸ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಆರೋಪಿಸಿದ್ದಾರೆ. ಹಾಗೆಯೇ ತಮ್ಮ EPIC ಸಂಖ್ಯೆಯನ್ನು ಬದಲಾಯಿಸಲಾಗಿದೆ ಎಂದೂ ದೂರಿದ್ದಾರೆ. ಬೇರೆ ಮತದಾರರ ಗುರುತಿನ ಚೀಟಿ ನೀಡಿದ ಕಾರಣಕ್ಕೆ ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ.
