ಮತ ಕಳವು ಆರೋಪದ ಬಗ್ಗೆ ನಡುವೆ ಭಾರತೀಯ ಚುನಾವಣಾ ಆಯೋಗವು (ECI) ಆಗಸ್ಟ್ 17ರ ಭಾನುವಾರದಂದು(ಇಂದು) ಪತ್ರಿಕಾಗೋಷ್ಠಿ ನಡೆಸಲಿದೆ. “ಭಾರತೀಯ ಚುನಾವಣಾ ಆಯೋಗವು ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ” ಎಂದು ಇಸಿಐ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ ಎಂದು ಕೆಲವು ಕ್ಷೇತ್ರಗಳ ಸಾಕ್ಷಿ ಸಹಿತ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ ಬಳಿಕ ಚುನಾವಣಾ ಆಯೋಗ ನಡೆಸುತ್ತಿರುವ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ. ಪತ್ರಿಕಾ ಮಾಹಿತಿ ಬ್ಯೂರೋ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಸ್ಟಿಲ್ ಅಥವಾ ಟಿವಿ ಕ್ಯಾಮೆರಾಮನ್‌ಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಭಾರಿ ಮತ ಕಳವು: ರಾಹುಲ್ ಗಾಂಧಿ ಆರೋಪ
SIR ಅನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ‘ಮತದಾರ ಅಧಿಕಾರ ಯಾತ್ರೆ’ ನಡೆಸಲಿದ್ದಾರೆ. ಇದಕ್ಕೂ ಮುನ್ನವೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ನಡೆಸಲಿದೆ.
ಆಗಸ್ಟ್ 1ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಮತ ಕಳವು ನಡೆದಿದೆ, ಇದರ ಬಗ್ಗೆ ಪುರಾವೆಯೂ ಇದೆ ಎಂದು ಹೇಳಿದ್ದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತ ಕಳವು ಬಗ್ಗೆ ಪುರಾವೆಯನ್ನೂ ಬಹಿರಂಗಪಡಿಸಿದ್ದರು.
ಹಾಗೆಯೇ ಬಿಹಾರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯೂ ಕೂಡಾ ಬಿಜೆಪಿಗೆ ಲಾಭ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ಮೊದಲ ಬಾರಿಗೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದೆ.
