ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಹೆಬ್ಬಾಳ್ಕರ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಚಿವರು ಸುಮಾರು 500 ಜನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಸಭೆ ನಡೆಸುತ್ತಿರುವದನ್ನು ಚಿತ್ರೀಕರಿಸಿಕೊಂಡು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಅಲ್ಲಿಂದ ಕಳಿಸಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
“ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಭೆ ಮಾಡಿಲ್ಲ, ಕಾರ್ಯಕರ್ತೆಯರಿಗೆ ಇತ್ತೀಚೆಗೆ ಕೆಲಸದ ಒತ್ತಡ ಜಾಸ್ತಿ ಆಗ್ತಿದೆ, ಈಗ ಬಿಎಲ್ಒ ಆಗಿ ಕೆಲಸ ಮಾಡ್ತಿದ್ದಾರೆ. ಬಿಎಲ್ಒ ಆಗಲು ನಮಗೆ ತೊಂದರೆ ಆಗ್ತಿದೆ ಎಂದು ಹೇಳಲು ಬಂದಿದ್ದರು. ಆದರೆ, ತಿಳಿ ಹೇಳಿ ಕೆಲಸ ಮಾಡಿ ಅಂತಾ ಹೇಳಿದ್ದೇನೆ” ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ʻʻದೂರು ಕೊಡಲಿ ಇದೆಲ್ಲಾ ಸರ್ವೇ ಸಾಮಾನ್ಯ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ದೇಶದ ಕಾನೂನಿಗೆ ಗೌರವ ಕೊಡುತ್ತೇನೆ. ಇದು ನನ್ನ ಐದನೇ ಚುನಾವಣೆ. ಹೀಗಾಗಿ ಚುನಾವಣೆ ಹೇಗೆ ಮಾಡಬೇಕು ಅನ್ನೋದು ಗೊತ್ತುʼʼ ಎಂದಿದ್ದಾರೆ.
