- ‘ನಿಮ್ಮನ್ನು ಕೂಡ ಏಕೆ ಅನರ್ಹಗೊಳಿಸಬಾರದು’ ಎಂದು ಕಾರಣ ಕೇಳಿ ನೋಟಿಸ್ ಜಾರಿ
- ದೂರು ಕೊಟ್ಟಾಗ ಬಿಜೆಪಿ ನಾಯಕ, ಆದೇಶ ಬಂದಾಗ ಜೆಡಿಎಸ್ ಶಾಸಕ ಮಂಜು!
ಲೋಕಸಭಾ ಚುನಾವಣೆಯಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಲ್ಲಿ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿರುವ ನಡುವೆಯೇ, ಹೈಕೋರ್ಟ್ ಪ್ರಜ್ವಲ್ ತಂದೆ ಹೆಚ್.ಡಿ ರೇವಣ್ಣ ಹಾಗೂ ದೂರುದಾರರಾಗಿದ್ದ ಜೆಡಿಎಸ್ ಶಾಸಕ ಎ ಮಂಜು ಅವರಿಗೂ ಶಾಕ್ ನೀಡಿದೆ.
ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಹಾಲಿ ಜೆಡಿಎಸ್ ಶಾಸಕರಾಗಿರುವ ಎ ಮಂಜು ಹಾಗೂ ಜಿ ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ. ಪ್ರಜ್ವಲ್ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ತನ್ನನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಎ ಮಂಜು ಅವರ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಎ ಮಂಜು(ದೂರು ಕೊಟ್ಟಾಗ ಬಿಜೆಪಿ ನಾಯಕನಾಗಿದ್ದ ಎ ಮಂಜು ಈಗ ಜೆಡಿಎಸ್ ಶಾಸಕ)
ಒಂದು ಕಡೆ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿರುವ ನಡುವೆಯೇ ಮತ್ತೊಂದೆಡೆ, ಚುನಾವಣೆಯ ಸಂದರ್ಭದಲ್ಲಿ ಮತದಾನ ನಡೆಯುವ ವೇಳೆ ಶಾಸಕ ರೇವಣ್ಣ ಮತದಾನದ ಬೂತ್‌ನಲ್ಲಿ ಕುಳಿತುಕೊಂಡು ವೋಟ್ ಹಾಕಿಸಿದ್ದರು ಎಂಬ ಆರೋಪದ ಬಗ್ಗೆ ಹಾಸನ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಡಿಯೋ ದಾಖಲೆಗಳನ್ನು ಗಮನಿಸಿದೆ. ಈ ಹಿನ್ನೆಲೆಯಲ್ಲಿ ಎಚ್ ಡಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ, ದೂರುದಾರ ಎ ಮಂಜು ಅವರಿಗೂ ನೋಟಿಸ್ ನೀಡಿದೆ.
‘ನಿಮ್ಮನ್ನು ಕೂಡ ಏಕೆ ಅನರ್ಹಗೊಳಿಸಬಾರದು’ ಎಂದು ಕಾರಣ ಕೇಳಿ ಹೈಕೋರ್ಟ್ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ನೋಟಿಸ್ ಜಾರಿಗೊಳಿಸಿದೆ.

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ
ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಅರಕಲಗೂಡು ಶಾಸಕ ಎ ಮಂಜು ಅವರಿಗೆ ನೋಟಿಸ್ ಜಾರಿ ಮಾಡಲು ರಿಜಿಸ್ಟ್ರಾರ್ ಗೆ ನ್ಯಾಯಾಲಯ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಒಂದು ಹೈಕೋರ್ಟ್ ಆದೇಶ; ನಾಲ್ವರಿಗೆ ಕುತ್ತು
ಹೈಕೋರ್ಟಿನ ಇಂದಿನ ಒಂದು ಆದೇಶವು, ಒಂದು ಪ್ರಕರಣದಲ್ಲಿ ಒಟ್ಟು ನಾಲ್ವರಿಗೆ ಕುತ್ತು ತರುವ ಸಂಭವವಿದೆ.
ಪ್ರಜ್ವಲ್ ಅವರನ್ನು ಅನರ್ಹಗೊಳಿಸಿದ್ದು ಒಂದು ಕಡೆಯಾದರೆ, ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಮತ್ತು ಸಹೋದರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ದೂರುದಾರನಾಗಿದ್ದ, ಹಾಲಿ ಜೆಡಿಎಸ್ ಶಾಸಕ ಎ ಮಂಜು ಅವರಿಗೂ ಕುತ್ತು ಬರುವ ಸಾಧ್ಯತೆಗಳಿವೆ.
ಈ ನಡುವೆ ಸುಪ್ರೀಂ ಕೋರ್ಟಿನಲ್ಲಿ ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ.
ವಿಪರ್ಯಾಸಕರ ಬೆಳವಣಿಗೆ
ದೂರು ಕೊಟ್ಟಾಗ ಬಿಜೆಪಿ ನಾಯಕರಾಗಿದ್ದ ಎ ಮಂಜು, ಹೈಕೋರ್ಟ್ ಆದೇಶ ಬಂದಾಗ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಯಿಂದ ಎ.ಮಂಜು ಸ್ಪರ್ಧೆ ಮಾಡಿದ್ದರು.
ಚುನಾವಣಾ ಫಲಿತಾಂಶದಲ್ಲಿ ಎ. ಮಂಜು ಅವರಿಗೆ ಸೋಲುಂಟಾಗಿದ್ದರಿಂದ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಿ ನನಗೆ ಸಂಸದ ಸ್ಥಾನವನ್ನು ನೀಡಬೇಕು ಎಂದು ಎ.ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಬೆನ್ನಲ್ಲಿಯೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ, ಈಗ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಚಕ್ರವ್ಯೂಹ ದಲ್ಲಿ ಸಿಲಿಕಿಕೊಂಡ ಜೆಡಿಎಸ್ ತಂಡ.