- ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸಲು ಅಗತ್ಯ ಕ್ರಮ: ಕೆ ಜೆ ಜಾರ್ಜ್
- ವಿದ್ಯುತ್, ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರದ ಆರೋಪ ತಳ್ಳಿ ಹಾಕಿದ ಸಚಿವರು
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್ ಬೇಡಿಕೆ ಮತ್ತು ಅದರ ಪೂರೈಕೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲು ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಈ ಬಾರಿ ವಿದ್ಯುತ್ ಬೇಡಿಕೆ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಗಸ್ಟ್ ತಿಂಗಳ ವಿದ್ಯುತ್ ಬಳಕೆ ಬೇಸಿಗೆ ಕಾಲದಲ್ಲಿನ ಬಳಕೆಯನ್ನು ಮೀರಿಸಿದೆ. ಈ ಅಕ್ಟೋಬರ್‌ನಲ್ಲೇ 15,000 ಮೆ.ವ್ಯಾ.ಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಒದಗಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಪ್ರಯತ್ನ ಮಾಡಿದ್ದು, ಅದರಂತೆ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ” ಎಂದರು.
“ನಿಯಮದ ಪ್ರಕಾರ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರ್ಕಾರ ಇದನ್ನು ತಳ್ಳಿಹಾಕುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭೀಕರ ಬರದ ನಡುವೆ ಅನಗತ್ಯ ವಿವಾದಗಳಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರ
“ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಬೆಳೆ ಮಾದರಿ ಮತ್ತು ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಮತ್ತು ಭತ್ತ ಬೆಳೆಯುವ ಭಾಗಗಳಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಛೀಫ್ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ರಾಜ್ಯದ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎಸ್‌ಎಲ್‌ಡಿಸಿ) ಪರಿಸ್ಥಿತಿ ಮೇಲೂ ನಿಗಾ ಇರಿಸಿದ್ದಾರೆ” ಎಂದರು.
“ಈ ವರ್ಷ ಮುಂಗಾರು ಕೈ ಕೊಟ್ಟಿರುವುದರಿಂದ ಗೃಹ ಬಳಕೆ ಮತ್ತು ನೀರಾವರಿ ಪಂಪ್ ಸೆಟ್‌ಗಳಲ್ಲಿ ವಿದ್ಯುತ್ ಬಳಕೆ ಅಂದಾಜು ಶೇ. 45ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ಬಳಕೆಯ ಹೆಚ್ಚಳದಲ್ಲಿ ನೀರಾವರಿ ಪಂಪ್ ಸೆಟ್‌ಗಳದ್ದು ಸಿಂಹಪಾಲು. ಉಷ್ಣ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯ ಕೊರತೆ (ಮಳೆ ಕೊರತೆ), ಸೌರ ವಿದ್ಯುತ್ ಮತ್ತು ಪವನ ಶಕ್ತಿ (ಪ್ರತಿಕೂಲ ಹವಾಮಾನ ಪರಿಸ್ಥಿತಿ) ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 300 ಮಿಲಿಯನ್ ಯೂನಿಟ್ ನಷ್ಟು ಕುಸಿತ ಕಂಡಿದೆ. ಪ್ರತಿದಿನ, 270-280 ಮಿ.ಯೂ. ವಿದ್ಯುತ್ ಬೇಡಿಕೆಯಿದ್ದರೂ, ನಮ್ಮ ಉತ್ಪಾದನಾ ಸಾಮರ್ಥ್ಯ 230-240 ಮೆ.ಯೂ.ನಷ್ಟಿದೆ. ಹಾಗಾಗಿ ದಿನಕ್ಕೆ 30-40 ಮಿ.ಯೂ. ವಿದ್ಯುತ್ ಕೊರತೆ ಎದುರಿಸುತ್ತಿದ್ದೇವೆ. ಆದರೂ ನಮ್ಮ ಸರ್ಕಾರವ ವಿದ್ಯುತ್ ಪೂರೈಕೆಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಂಡು ಗೃಹ ಬಳಕೆದಾರರು, ರೈತರು ಮತ್ತು ಕೈಗಾರಿಕೋದ್ಯಮಿಗಳ ಹಿತಾಸಕ್ತಿ ಕಾಯುತ್ತಿದೆ”ಎಂದು ವಿವರಿಸಿದರು.
“ಶೀಘ್ರದಲ್ಲೇ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಕೇಂದ್ರ ಗ್ರಿಡ್‌ನಿಂದ ವಿದ್ಯುತ್ ಖರೀದಿಸುವ ಜತೆಗೆ ಪಂಜಾಬ್, ಉತ್ತರ ಪ್ರದೇಶದಿಂದಲೂ ಪರಸ್ಪರ ವಿದ್ಯುತ್ ಕೊಟ್ಟು-ತೆಗೆದುಕೊಳ್ಳುವ ವ್ಯವಸ್ಥೆ ಆಗಲಿದೆ” ಎಂದು ಮಾಹಿತಿ ನೀಡಿದರು.