- 68,526 ರೂ. ದಂಡವನ್ನು ಆನ್ಲೈನ್ ಮೂಲಕ ಪಾವತಿ
- ಸುದ್ದಿಗೋಷ್ಠಿ ನಡೆಸಿ ಮಹಜರ್ ಕಾಪಿ ಕೇಳಿದ ಕುಮಾರಸ್ವಾಮಿ
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ವಿದ್ಯುತ್ ಕಳ್ಳತನ ಮಾಡಿರುವುದಕ್ಕೆ ಬೆಸ್ಕಾಂ ವಿಧಿಸಿದ್ದ ದಂಡವನ್ನು ಕುಮಾರಸ್ವಾಮಿ ಪಾವತಿ ಮಾಡಿದ್ದಾರೆ.
ಅಕ್ರಮವಾಗಿ ವಿದ್ಯುತ್ ಬಳಸಿಕೊಂಡಿರುವುದಕ್ಕೆ ಬೆಸ್ಕಾಂ 68,526 ರೂ. ದಂಡವನ್ನು ವಿಧಿಸಿತ್ತು.
ದಂಡದ ಮೊತ್ತವನ್ನು ಕುಮಾರಸ್ವಾಮಿ ಅವರು ಆನ್ಲೈನ್ ಮೂಲಕ ಪಾವತಿಸಿದ್ದಾರೆ. 2.5 ಕಿಲೋ ವ್ಯಾಟ್ಗೆ 2,526 ರೂ. ನಂತೆ ಒಟ್ಟು 68,526 ರೂ. ದಂಡದ ಮೊತ್ತವನ್ನು ಪಾವತಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, “ಬೆಸ್ಕಾಂನವರು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಆ ಬಿಲ್ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ಉಪಯೋಗ ಅಂತ ಇದೆ. 2,526 ರೂಪಾಯಿ ಹಾಕಿದ್ದಾರೆ. ನಮ್ಮ ಮನೆಗೆ 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮಹಜರ್ ಕಾಪಿ ಕೇಳಿದ್ದೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ ದೊಡ್ಡ ಪ್ರಾಮಾಣಿಕರಾ : ಕುಮಾರಸ್ವಾಮಿ ಪ್ರಶ್ನೆ
“ಡಿಸಿಎಂ ಡಿಕೆ ಶಿವಕುಮಾರ್‌ಗೆ ಸೇರಿದ ಲುಲು ಮಾಲ್ ಕಾಮಗಾರಿ ವೇಳೆ ಕರೆಂಟ್ ಬಿಲ್ ನೀಡಿಲ್ಲ. ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ನೀಡಿಲ್ಲ. ಲುಲು ಮಾಲ್ ಬಳಕೆ ಮಾಡಿದ ವಿದ್ಯುತ್ ಬಿಲ್ಗೆ ದಂಡ ಹಾಕುತ್ತೀರಾ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
“ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂ. ಹಾಕಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು? ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ದಂಡ ಕಟ್ಟಿರುವೆ. ಇನ್ಮುಂದೆ ವಿದ್ಯುತ್ ಕಳ್ಳ ಎಂದು ಕರೆಯುವುದನ್ನು ನಿಲ್ಲಿಸಿಬಿಡಿ. ನಾನೇನು ಹಗಲು ದರೋಡೆಕೋರ ಅಲ್ಲ” ಎಂದು ಪರೋಕ್ಷವಾಗಿ ಕುಟುಕಿದರು.