ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ 185 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮಸೀದಿಯ ಗೋಡೆಯನ್ನು ಅಧಿಕಾರಿಗಳು ಕಡೆವಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನಡೆದಿದೆ.
ಫತೇಪುರದ ಲಲೌಲಿ ಪಟ್ಟಣದಲ್ಲಿ 1839ರಲ್ಲಿ ನೂರಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಮಸೀದಿಯ ಸುತ್ತ 1956ರಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಇದೀಗ, ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಮತ್ತು ಹೆದ್ದಾರಿಯ ವಿಸ್ತರಣೆಗೆ ಅಡ್ಡಿಯಾಗಿದೆ ಎಂಬ ಕಾರಣ ನೀಡಿ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ.
ಅಯೋಧ್ಯೆಯ ಬಾಬ್ರಿ ಮಸೀದಿ ತೀರ್ಪು ಬಂದ ಬಳಿಕ ಮಸೀದಿಗಳನ್ನು ಗುರಿಯಾಗಿಸಿಕೊಂಡು ಹಿಂದುತ್ವವಾದಿ ಸಂಘಟನೆಗಳು ವಿವಾದ ಎಬ್ಬಿಸುತ್ತಿವೆ. ಕಾಶಿ, ಮಥುರಾ, ಶ್ರೀರಂಗಪಟ್ಟಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಈಗ ಮಸೀದಿ ಇರುವ ಸ್ಥಳದಲ್ಲಿಯೇ ಹಿಂದೆ ದೇವಾಲಯಗಳಿದ್ದವು ಎಂದು ವಾದಿಸಲಾಗಿತ್ತಿದೆ. ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.
ಅದರಲ್ಲೂ ಉತ್ತರ ಪ್ರದೇಶವನ್ನು ಬಿಜೆಪಿ-ಆರ್‌ಎಸ್‌ಎಸ್ ತಮ್ಮ ಕೋಮು ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದು, ಕೋಮುದ್ವೇಷವನ್ನು ನಿರಂತರವಾಗಿ ಹರಡಲಾಗುತ್ತಿದೆ. ಇತ್ತೀಚೆಗೆ, ಉತ್ತರ ಪ್ರದೇಶದ ಸಂಭಲ್‌ನಲ್ಲಿ ಮಸೀದಿ ಸಮೀಕ್ಷೆಗೆ ಸೆಷನ್ಸ್ ಕೋರ್ಟ್ ಆದೇಶಿಸಿತ್ತು. ಬಳಿಕ, ಮಸೀದಿ ಬಳಿ ಹಿಂಸಾಚಾರವೂ ನಡೆದಿತ್ತು.
ಇದೀಗ, ಯೋಗಿ ಆದಿತ್ಯನಾಥ್ ಸರ್ಕಾರವು ಲಲೌಲಿ ಪಟ್ಟಣದ ನೂರಿ ಮಸೀದಿಯನ್ನು ಕಡೆವಿದೆ. ಭಾರಿ ಭದ್ರತೆಯಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮಸೀದಿಯ ಒಂದು ಭಾಗವನ್ನು ಕೆಡೆವಿದ್ದಾರೆ.
ಮಸೀದಿಯ ಸುಮಾರು 20 ಮೀಟರ್‌ನಷ್ಟು ಕಟ್ಟಡವನ್ನು ಅಧಿಕಾರಿಗಳು ಬುಲ್ಡೋಜರ್ ಮೂಲಕ ಉರುಳಿಸಿದ್ದಾರೆ. ಕಟ್ಟಡ ಕೆಡವಲು ಈ ಹಿಂದೆ, ಮಸೀದಿ ನಿರ್ವಹಣಾ ಸಮಿತಿಗೆ ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು ಎಂದು ಹೇಳಲಾಗಿದೆ.
ಅಧಿಕಾರಿಗಳ ನಡೆಯ ವಿರುದ್ದ ಮಸೀದಿ ನಿರ್ವಹಣಾ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನ ಮೆಟ್ಟಿಲೇರಿದೆ.