ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಅನಧಿಕೃತ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ಕೂಡಲೇ ಸರ್ಕಾರ ಕಾರ್ಯ ಪ್ರವೃತ್ತವಾಗಿ 1980 ನಂತರ ಅನಧಿಕೃತವಾಗಿ ಅರಣ್ಯ ಭೂಮಿ ಅತಿಕ್ರಮಣ ಮಾಡಿರುವಂತಹ ಪ್ರಕರಣಗಳನ್ನು ವಿಳಂಬವಿಲ್ಲದೆ ಅರಣ್ಯ ಭೂಮಿಯ ಅತಿಕ್ರಮಣದಾರರನ್ನು ಹೊರಹಾಕಿ, ಭವಿಷ್ಯದ ಪೀಳಿಗೆಗೆ ಅರಣ್ಯವನ್ನು ರಕ್ಷಿಸಬೇಕು ಎಂದು ಜನಸಂಗ್ರಾಮ ಪರಿಷತ್ ಆಗ್ರಹಿಸಿದೆ.
ನೆಲ, ಜಲ, ಖನಿಜ ಹಾಗೂ ಅರಣ್ಯ ಸಂರಕ್ಷಣೆಗಾಗಿ ಜನಸಂಗ್ರಾಮ ಪರಿಷತ್ ಹಲವಾರು ದಶಕಗಳಿಂದ ಸಾಮಾಜಿಕ ಮತ್ತು ನ್ಯಾಯಾಂಗ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಅರಣ್ಯ ಭೂಮಿ ಅತಿಕ್ರಮಣ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಸರ್ಕಾರವನ್ನು ಒತ್ತಾಯಿಸಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಮನವಿ ಸಲ್ಲಿಸಿದೆ.
ಸಮಾಜ ಪರಿವರ್ತನಾ ಸಮುದಾಯ ಮತ್ತು ನಮ್ಮ ಬೆಂಗಳೂರು ಫೌಂಡೇಶನ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯವು ಅರಣ್ಯ ಪ್ರದೇಶಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅರಣ್ಯ ಭೂಮಿ ಅತಿಕ್ರಮಣ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಯಾವ ಮುಲಾಜಿಗೂ ಒಳಗಾಗದೇ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಜನಸಂಗ್ರಾಮ ಪರಿಷತ್ ಒತ್ತಾಯಿಸಿದೆ.
ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 24ರ ಪ್ರಕಾರ ಅರಣ್ಯ ಪ್ರದೇಶವನ್ನು ಅನಧಿಕೃತವಾಗಿ ಅತಿಕ್ರಮಣ ಮಾಡುವುದು ಕಾಯ್ದೆಯ ಉಲ್ಲಂಘನೆಯಾಗಿದೆ. ಮತ್ತು ಇದೇ ಕಾಯ್ದೆಯ ಕಲಂ 64 ಎ ರ ಪ್ರಕಾರ ಇಂತಹ ಅನಧಿಕೃತ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲು ಅವಕಾಶವಿದೆ. ಕಳೆದ ಹತ್ತು ವರ್ಷಗಳ ಹಿಂದೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇದ್ದ ಒಟ್ಟು ಅರಣ್ಯ ಒತ್ತುವರಿ ಪ್ರಕರಣಗಳ ಸಂಖ್ಯೆ 1ಲಕ್ಷದ 10 ಸಾವಿರದ 626, ಹಾಗೂ ಒಟ್ಟು ಅನಧಿಕೃತವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಭೂಮಿಯ ವಿಸ್ತೀರ್ಣ 24,400,42 ಎಕರೆ ಅರಣ್ಯ ಪ್ರದೇಶ ಎಂದು ಅರಣ್ಯ ಇಲಾಖೆಯ ಅಂಕಿ ಅಂಶಗಳಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದೆ.
ರಾಜ್ಯಾದ್ಯಂತ ಇರುವ ಅರಣ್ಯ ಒತ್ತುವರಿ ಪ್ರಕರಣಗಳ ವಿವರ
- 30 ಎಕರೆಗೂ ಹೆಚ್ಚು : 133 ಪ್ರಕರಣಗಳಿದ್ದು, 5344 ಎಕರೆ ಒತ್ತುವರಿ ಯಾಗಿದೆ.
- 10 ರಿಂದ 30 ಎಕರೆವರೆಗೆ : 718 ಪ್ರಕರಣಗಳಿದ್ದು, 12898 ಎಕರೆ ಒತ್ತುವರಿಯಾಗಿರುತ್ತದೆ.
- 3 ರಿಂದ 10 ಎಕರೆವರೆಗಿನ : 23423 ಪ್ರಕರಣಗಳಿದ್ದು, 71108 ಎಕರೆ ಒತ್ತುವರಿಯಾಗಿರುತ್ತದೆ.
- 3 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯ 86352 ಪ್ರಕರಣಗಳಿದ್ದು, 115089 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ.
ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಕೇವಲ ಅತಿಕ್ರಮಿತ ಅರಣ್ಯ ಭೂಮಿಯ ವಿಸ್ತೀರ್ಣದ ವಿವರ ಮಾತ್ರ ನಮೂದಿಸಿಲಾಗಿದ್ದು, ಒತ್ತುವರಿ ಜಮೀನಿನ ವಿಸ್ತೀರ್ಣದ ಯಾವ ವಿವರಗಳು ಸಹ ಇಲ್ಲ. ಈ ಕೂಡಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳೆರಡು ಜಂಟಿಯಾಗಿ ಅರಣ್ಯ ಒತ್ತುವರಿದಾರನ ಭೂಮಿಯ ಜೊತೆಗೆ ತನ್ನ (ಅವನ/ಅವಳ ಸ್ವಂತ ಪಟ್ಟಾ ಜಮೀನಿನ ವಿಸ್ತೀರ್ಣದ) ಭೂಮಿಯ ವಿಸ್ತೀರ್ಣವನ್ನು ನಮೂದಿಸ ತಕ್ಕದ್ದು ಮತ್ತು ಇದಕ್ಕಾಗಿ ಪ್ರತ್ಯೇಕ ಕಾಲಂ ನಿಗದಿಪಡಿಸಿ ಭೂ ವಿಸ್ತೀರ್ಣವನ್ನು ನಮೂದಿಸ ಬೇಕು” ಎಂದು ಅರಣ್ಯ ಇಲಾಖೆ ಮತ್ತು ಸರ್ಕಾರವನ್ನು ಆಗ್ರಹಿಸಿದೆ.
“ಒತ್ತುವರಿದಾರನ ಪಟ್ಟ ಜಮೀನು ಸೇರಿ) ಅರಣ್ಯ ಒತ್ತುವರಿದಾರರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವಂತಹ ಸೂಕ್ತವಾದ ಪ್ರಸ್ತಾವನೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಆದರೆ ಇದುವರೆಗೂ ಸಹ ಅರಣ್ಯ ಇಲಾಖೆಯಿಂದಾಗಲಿ ಅಥವ ಸರ್ಕಾರದಿಂದಾಗಲಿ ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಪುನರ್ವಸತಿಯಾಗಲಿ ಪ್ಯಾಕೇಜ್ ಪರಿಹಾರವಾಗಲಿ ದೊರೆತ ಉದಾಹರಣೆಗಳು ಇಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರವು ಈ ಕೂಡಲೇ ಗಮನಹರಿಸಬೇಕು” ಎಂದು ಜನಸಂಗ್ರಾಮ ಪರಿಷತ್ ಸರ್ಕಾರವನ್ನು ಕೋರಿದೆ.