ಶಿವಮೊಗ್ಗದಲ್ಲಿ ಬಿಜೆಪಿ ಎದುರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಸೋಮವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 18ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ. ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಕೆ ಎಸ್ ಈಶ್ವರಪ್ಪ ಮನವೊಲಿಸಲು ಬಿಜೆಪಿ ನಾಯಕರ ಹರಸಾಹಸ: ಸಂಧಾನ ವಿಫಲ
“ಪ್ರಧಾನಿ ಮೋದಿ ನನ್ನ ದೇವರು” ಎಂದು ಪುನರುಚ್ಛರಿಸಿದ ಈಶ್ವರಪ್ಪ, “ನನ್ನ ಪ್ರಾಣ ಹೋದರೂ ಕೂಡಾ ನಾನು ಮೋದಿ ಹೆಸರು ಹೇಳುವುದನ್ನು ನಿಲ್ಲಿಸಲಾರೆ. ಆದರೆ ಈಗ ಒಂದು ಕುಟುಂಬದ ಕಪಿಮುಷ್ಠಿಯಲ್ಲಿರುವ ಪಕ್ಷವನ್ನು ಬಿಡುಗಡೆ ಮಾಡಬೇಕೆಂಬ ಕಾರಣಕ್ಕೆ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಗೆದ್ದ ಬಳಿಕ ಮೋದಿಯವರ ಬಳಿ ಹೋಗುತ್ತೇನೆ, ಅವರನ್ನು ಭೇಟಿಯಾಗುತ್ತೇನೆ” ಎಂದರು.
“ಸ್ಪರ್ಧೆಯಿಂದ ಹಿಂಜರಿಯುವ ಮಾತೇ ಇಲ್ಲ”
ತನ್ನ ಪುತ್ರ ಕೆ ಇ ಕಾಂತೇಶ್ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡುವುದಾಗಿ ಹೇಳಿರುವ ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಲ್ಲಿದ್ದು, ಇಂದು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದರೆ ಈಶ್ವರಪ್ಪ ತನಗೆ ಬೇರೆ ಕೆಲಸವಿದೆ ಎಂದು ಮನೆಯಿಂದ ತೆರಳಿದ್ದರು ಎಂಬ ಮಾಹಿತಿಯಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿರುವ ಈಶ್ವರಪ್ಪ ಅವರು “ಸ್ಪರ್ಧೆಯಿಂದ ಹಿಂಜರಿಯುವ ಮಾತೇ ಇಲ್ಲ” ಎಂದಿದ್ದಾರೆ.
“ಏನೇ ಆದರೂ ಲೋಕಸಭೆ ಚುನಾವಣೆಯಿಂದ ಹಿಂಜರಿಯುವ ಮಾತಿಲ್ಲ. ಸಂಸದೀಯ ಮಂಡಳಿ ಸದಸ್ಯರಾದ ಬಿ ಎಸ್ ಯಡಿಯೂರಪ್ಪ ಸಂಧಾನಕ್ಕೆ ಶಾಸಕ ಆರಗ ಜ್ಞಾನೇಂದ್ರರನ್ನು ಕಳುಹಿಸಿದ್ದರು. ಆದರೆ ನಾನು ಸಂಧಾನಕ್ಕೆ ಒಪ್ಪಿಲ್ಲ” ಎಂದ ಈಶ್ವರಪ್ಪ, “ಯಡಿಯೂರಪ್ಪ ಕುಟುಂಬದವರು ಮೋಸ ಮಾಡಿದ್ದಾರೆ” ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.
