“ಈಶ್ವರಪ್ಪನವರೇ, ನಾನೇ ನಿಮ್ಮ ಮುಂದೆ ಬಂದು ನಿಲ್ಲುವೆ, ನನ್ನ ಕೊಂದು ಬಿಡಿ. ನಿಮ್ಮ ಆಸೆ ಈಡೇರಿಸಿಕೊಳ್ಳಿ” ಎಂದು ಸಂಸದ ಡಿ ಕೆ ಸುರೇಶ್ ಆಹ್ವಾನ ನೀಡಿದರು.
“ಡಿ ಕೆ ಸುರೇಶ್ ಅವರಂತೆ ದೇಶ ಒಡೆಯುವ ಹೇಳಿಕೆ ಕೊಡುವವರನ್ನು ಗುಂಡಿಟ್ಟು ಕೊಲ್ಲಬೇಕು” ಎಂದು ಹೇಳಿಕೆ ನೀಡಿದ್ದ ಕೆ ಎಸ್ ಈಶ್ವರಪ್ಪ ಅವರ ಮಾತಿಗೆ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
“ನಾವು ಭಾರತ ಒಕ್ಕೂಟದಲ್ಲೇ ಇರುವವರು. ನಾನು ಭಾರತ ವಿರೋಧಿ ಅಲ್ಲ. ಎಲ್ಲ ವಿಷಯಗಳಲ್ಲಿ ಕರ್ನಾಟಕದ ಮೇಲೆ ಆಗುತ್ತಿರುವ ಅನ್ಯಾಯ ತಡೆಯಲಾಗದೆ ಹಾಗೇ ಮಾತನಾಡಿರುವೆ. ಅದಕ್ಕಾಗಿ ನನ್ನನ್ನು ಕೊಲ್ಲಬೇಕು ಎಂದರೆ ಏನು ಮಾಡುವುದು. ಈಶ್ವರಪ್ಪ ಮುಂದೆ ಹೋಗಿ ನಿಲ್ಲುವೆ. ಕೊಂದು ತಮ್ಮ ಆಸೆ ಈಡೇರಿಸಿಕೊಳ್ಳಲಿ” ಎಂದರು.
ಈಶ್ವರಪ್ಪ ವಿರುದ್ಧ ಈಗಾಗಲೇ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಎನ್ ಎಸ್ ಯುಐ ಕಾರ್ಯಕರ್ತರು ದೂರು ಸಲ್ಲಿಸಿದ್ದು, ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ಆಯೋಗಕ್ಕೆ ಅಧ್ಯಕ್ಷರಿಲ್ಲ; ಶೋಷಿತ ಹೆಣ್ಣುಮಕ್ಕಳ ನೋವು ಕೇಳುವವರಿಲ್ಲ
ಮತ್ತೊಂದು ದೂರು ದಾಖಲು
ದೇಶವನ್ನು ಇಬ್ಭಾಗ ಮಾಡುವ ಹೇಳಿಕೆ ನೀಡುವ ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.
ಶುಕ್ರವಾರ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಆರ್‌ಆರ್ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಹಾಗೂ ಸಂಜಯ್ ಅವರು ದೂರು ದಾಖಲಿಸಿದ್ದಾರೆ.