ಅನುದಾನದ ಲಭ್ಯತೆ ಮತ್ತು ಬೇಡಿಕೆಗೆ ಅನುಸಾರವಾಗಿ ಹಿಂದುಳಿದ ವರ್ಗಗಳ ಹೊಸ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣಪ್ಪ ಕಮಕನೂರ ಇವರ, ನಿಯಮ 72 ರಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತಂತೆ ಸರ್ಕಾರದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಗ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸ್ತುತ 1,281 ಮೆಟ್ರಿಕ್ ಪೂರ್ವ ಮತ್ತು 1,161 ಮಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಸೇರಿದಂತೆ ಒಟ್ಟು 2442 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಟ್ಟು 2,28,286 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2022-23ನೇ ಸಾಲಿನಲ್ಲಿ ರಾಜ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿನ ಸಂಖ್ಯಾ ಬಲವನ್ನು ಶೇ.25 ರಂತೆ ಹೆಚ್ಚಿಸಿ 30,000 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗಿದೆ. ಅನುದಾನದ ಲಭ್ಯತೆ ಮತ್ತು ಬೇಡಿಕೆಗೆ ಅನುಸಾರ ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ಆನ್ ಲೈನ್ ಗೇಮಿಂಗ್ ಕಡಿವಾಣಕ್ಕೆ ಕ್ರಮ: ಸಚಿವ
ದಿನೇಶ್ ಗುಂಡೂರಾವ್
2,442 ವಿದ್ಯಾರ್ಥಿನಿಲಯಗಳ ಪೈಕಿ 1,611 ವಿದ್ಯಾರ್ಥಿನಿಲಯಗಳು ಸ್ವಂತ ಕಟ್ಟಡಗಳಲ್ಲಿ, 680 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಹಾಗೂ 151 ವಿದ್ಯಾರ್ಥಿ ನಿಲಯಗಳು ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ 485 ನಿವೇಶನಗಳು ಲಭ್ಯವಿದ್ದು, 170 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನಿವೇಶನ ಹಾಗೂ ಆಯವ್ಯಯದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.