ರಾಜ್ಯದಲ್ಲಿ ಈ ವರ್ಷ ವಾಡಿಕೆಯಂತೆ ಮಳೆಯಾಗದೇ ಬರಗಾಲ ಎದುರಾಗಿದೆ. ರೈತರಿಗೆ ಬೆಳೆ ಸಿಗದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾದ ಅನುದಾನವನ್ನು ನೀಡುತ್ತಿಲ್ಲ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯ ಅರಿವಿದ್ದರೂ, ಹಣ ಬಿಡುಗಡೆ ಮಾಡದೇ ಕೇಂದ್ರದಲ್ಲಿರುವ ಮೋದಿ ಸರ್ಕಾರ ದಿವಾಳಿತನ ತೋರುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಲೋಕಸಭಾ ಸದಸ್ಯರಿಗೆ ನೀಡಬೇಕಾದ ಲೋಕಸಭಾ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ವಾರ್ಷಿಕ ₹5 ಕೋಟಿ ಹಣವನ್ನು ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಲೋಕಸಭಾ ಸದಸ್ಯರಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಮಾಡಿಲ್ಲ” ಎಂದು ಹೇಳಿದ್ದಾರೆ.
“ಪ್ರಸಕ್ತ ಸಾಲಿನಲ್ಲಿ ಒಟ್ಟು ಕರ್ನಾಟಕದ ಸದಸ್ಯರಿಗೆ ₹205 ಕೋಟಿ ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರು ತಮ್ಮ ಪಾಲಿನ ಹಣವನ್ನು ಕೇಳದೆ ಕದ್ದುಮುಚ್ಚಿ ಓಡಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರಿಗೆ 2023 ಡಿಸೆಂಬರ್ 2ಕ್ಕೆ ಒಟ್ಟು ₹488.5 ಕೋಟಿ ಹಣ ಬಿಡುಗಡೆ ಮಾಡಲು ಅವಕಾಶವಿದೆ. ಆದರೆ, ಇಲ್ಲಿಯವರೆಗೆ ₹225 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ₹263.5 ಕೋಟಿ ಹಣ ಬಿಡುಗಡೆಗೆ ಬಾಕಿ ಇದೆ” ಎಂದು ವಿವರಿಸಿದ್ದಾರೆ.
“ಇನ್ನು ಬಿಡುಗಡೆಯಾಗಿರುವ ಹಣದಲ್ಲಿ ₹40.94 ಕೋಟಿ ಉಪಯೋಗಿಸದೆ ಕೇಂದ್ರ ಸರ್ಕಾರದ ಖಾತೆಯಲ್ಲಿ ಬಾಕಿ ಇದೆ. ಪ್ರಚಾರಕ್ಕಾಗಿ ಬೊಬ್ಬೆ ಹೊಡೆಯುವ ಬಿಜೆಪಿಯ ಲೋಕಸಭಾ ಸದಸ್ಯರು ಕೇಂದ್ರದ ಅನುದಾನದ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ” ಎಂದಿದ್ದಾರೆ.
“ಕಾನೂನಿನ ಪ್ರಕಾರ ಅವಕಾಶವಿರುವ ಹಣವನ್ನೇ ಬಳಸದ ರಾಜ್ಯ ಬಿಜೆಪಿ ಸಂಸದರು ಮತ್ತು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹಣಕಾಸು ಸಚಿವರಾಗಿರುವ ಕೇಂದ್ರದ ನಿರ್ಮಲ ಸೀತಾರಾಮನ್ ಅವರು ಕರ್ನಾಟಕಕ್ಕೆ ಮೋಸ ಎಸಗಿದ್ದಾರೆ” ಎಂದು ಹೇಳಿದ್ದಾರೆ.
“ಮೋದಿಯ ಹೆಸರನ್ನೇ ನೆಚ್ಚಿಕೊಂಡಿರುವ ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರು ನಮ್ಮ ರಾಜ್ಯಕ್ಕೆ ಅನುದಾನಗಳನ್ನು ತರುವಲ್ಲಿ, ತೆರಿಗೆಯ ಪಾಲನ್ನು ಕೇಳುವಲ್ಲಿ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ಪಡೆಯುವಲ್ಲಿ ಕರ್ನಾಟಕದ ಜನರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಕಾಲ ಮಿಷನ್ | ರಾಜ್ಯದಲ್ಲಿ ಪ್ರಥಮ ಬಾರಿಗೆ ಎಸ್‌ಎಂಎಸ್ ಮೂಲಕ ಮೇಲ್ಮನವಿ ಸಲ್ಲಿಸುವ ಅವಕಾಶ
“ಕರ್ನಾಟಕದ ಬರಗಾಲದ ಬಗ್ಗೆ ಒಣ ಭಾಷಣ ಮಾಡುವ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಸಂಸದರು ಕೇಂದ್ರದ ತಮ್ಮ ಪಾಲಿನ ಅನುದಾನಗಳನ್ನು ಪಡೆದು ಅದನ್ನು ಬರ ಪರಿಹಾರ ನಿಧಿಗೆ ನೀಡಲು ಪ್ರದೇಶ ಕಾಂಗ್ರೆಸ್ ಒತ್ತಾಯಿಸುತ್ತದೆ. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಬಿಜೆಪಿ ಸಂಸದರ ಮೌನ ಖಂಡಿಸುತ್ತದೆ” ಎಂದು ಹೇಳಿದ್ದಾರೆ.