- ರಾಮದಾಸ್, ಈಶ್ವರಪ್ಪ ಹೆಸರು ಉಲ್ಲೇಖಿಸಿ ಟೀಕೆ
- ಟ್ವೀಟ್ ಮಾಡಿ ಇದೇನು ಕಾಕತಾಳೀಯ ಎಂದ ಕಾಂಗ್ರೆಸ್
ಪ್ರಧಾನಿ ಮೋದಿ ಅವರಿಂದ ರಾಜ್ಯದಲ್ಲಿ ಉದ್ಘಾಟನೆಯಾಗಿದ್ದ ಅನೇಕ ಯೋಜನೆಗಳ ವೈಫಲ್ಯ ಕಂಡಿವೆ. ಅವುಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮೋದಿ ಮುಟ್ಟಿದ್ದೆಲ್ಲ ಮಟಾಷ್’ ಎಂದು ಲೇವಡಿ ಮಾಡಿದೆ.
ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾಗಿದ್ದೆ ತಡ ಪ್ರಧಾನಿ ಮೋದಿ ಸಾಲು ಸಾಲು ಯೋಜನೆಗಳನ್ನು ಉದ್ಘಾಟಿಸಿದ್ದರು. ಬೆನ್ನಲ್ಲೇ ಆ ಯೋಜನೆಗಳು ಕಳಪೆ ಎಂಬುದು ಬಯಲಾಗಿದ್ದವು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಮೋದಿ ಉದ್ಘಾಟಿಸಿದ ಹೈವೆ ಮಳೆಯಲ್ಲಿ ಮುಳುಗಿತು. ಟೇಪ್ ಕಟ್ ಮಾಡಿದ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿತು. ರೋಡ್ ಶೋ ಮಾಡಿದ ರಸ್ತೆ ಕಿತ್ತುಬಂತು. ಶಿವಮೊಗ್ಗ ಏರ್ಪೋರ್ಟ್ ಬಾಗಿಲು ಮುಚ್ಚಿತು” ಎಂದು ವ್ಯಂಗ್ಯವಾಡಿದೆ.
ಬರೀ ಯೋಜನೆಗಳಿಗೆ ಸೀಮಿತವಾಗದ ಕಾಂಗ್ರೆಸ್ ಟೀಕೆ ರಾಜ್ಯ ನಾಯಕರನ್ನು ಉಲ್ಲೇಖಿಸಿದೆ. “ಬೆನ್ನಿಗೆ ಗುದ್ದಿದ ರಾಮದಾಸ್ ಮನೆಯಲ್ಲಿ ಕೂರುವಂತಾಯ್ತು. ಕರೆ ಮಾಡಿದ ಈಶ್ವರಪ್ಪರ ರಾಜಕೀಯ ಜೀವನ ಮುಗಿಯಿತು. ಇದೇನು ಕಾಕತಾಳೀಯ” ಎಂದು ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ಉದ್ಘಾಟಿಸಿದ್ದ ಬೆಂಗಳೂರು ಮೈಸೂರು ಹೆದ್ದಾರಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅದರ ಕಳಪೆ ಕಾಮಗಾರಿಯಿಂದ ಹಿಡಿದು ಟೋಲ್ ಸಂಗ್ರಹದವರೆಗೆ ಜನಾಕ್ರೋಶ ವ್ಯಕ್ತವಾಗಿತ್ತು.
ಇನ್ನೂ ಪೂರ್ಣವಾಗದ ಕೆ ಆರ್ ಪುರ – ವೈಟ್‌ಫೀಲ್ಡ್ ಮೆಟ್ರೋಗೆ ಸಹ ಮೋದಿ ತರಾತುರಿಯಲ್ಲಿ ಹಸಿರು ಬಾವುಟ ತೋರಿಸಿದ್ದರು. ಅದಾದ ವಾರದ ಬಳಿಕವಷ್ಟೇ ಸಣ್ಣ ಮಳೆಗೆ ನೀರು ಮೆಟ್ರೊ ನಿಲ್ದಾಣಕ್ಕೆ ನುಗ್ಗಿದ್ದವು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ನಾಮಪತ್ರಗಳ ತಿರಸ್ಕರಿಸದಂತೆ ಸಿಎಂ ಕಚೇರಿಯಿಂದ ಒತ್ತಡ; ಡಿಕೆಶಿ ಆರೋಪ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನದಂದು ಪ್ರಧಾನಿ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಆದರೆ, ಈವರೆಗೆ ಒಂದೇ ಒಂದು ವಿಮಾನವೂ ಅಲ್ಲಿ ಹಾರಾಟ ನಡೆಸಿಲ್ಲ.
ಈ ವಿಷಯಗಳನ್ನೇ ಕಾಂಗ್ರೆಸ್ ಉಲ್ಲೇಖಿಸಿ, ಮೋದಿ ಅವರ ಕಾಲೆಳೆದಿದೆ. ಕೆಲ ತಿಂಗಳ ಹಿಂದೆಯಷ್ಟೇ ರಾಜ್ಯಕ್ಕೆ ಬಂದಿದ್ದ ಮೋದಿ ಮಾಜಿ ಶಾಸಕ ರಾಮದಾಸ್ ಅವರ ಬೆನ್ನಿಗೆ ಗುದ್ದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದೆ.