ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ವಿರುದ್ಧವಾಗಿ ನೀಡಿದ ಹೇಳಿಕೆಯನ್ನು ಟೀಕಿಸಿದ್ದ ಬಿಜೆಪಿಯ ಮಾಜಿ ಬಿಕಾನೇರ್ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಉಸ್ಮಾನ್ ಗನಿ ಅವರನ್ನು ‘ಶಾಂತಿ ಭಂಗ’ದ ಆರೋಪದ ಮೇಲೆ ಬಂಧನ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಕ್ತ ಪ್ರಸಾದ್ ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಧೀರೇಂದ್ರ ಶೇಖಾವತ್, “ಎರಡು-ಮೂರು ದಿನಗಳ ಹಿಂದೆ ಅಂದರೆ ಅವರು (ಪ್ರಧಾನಿ ವಿರುದ್ಧ) ಹೇಳಿಕೆ ನೀಡಿದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ವಾಹನವನ್ನು ಗನಿ ಅವರ ಸ್ಥಳಕ್ಕೆ ಕಳುಹಿಸಲಾಗಿತ್ತು. ಶನಿವಾರ ಮಧ್ಯಾಹ್ನ ಪೊಲೀಸ್ ಠಾಣೆಗೆ ಅವರು ಬಂದಿದ್ದಾರೆ. ಅವರು ದೆಹಲಿಯಲ್ಲಿದ್ದರು ಮತ್ತು ಇಂದು ಅವರು (ಪೊಲೀಸ್ ಠಾಣೆಗೆ) ಬಂದು ತನ್ನ ಮನೆಗೆ ಪೊಲೀಸ್ ವಾಹನವನ್ನು ಕಳುಹಿಸಲು ನಿಮಗೆಷ್ಟು ಧೈರ್ಯ ಎಂದು ಪ್ರಶ್ನಿಸಿದರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ದ್ವೇಷ ಭಾಷಣ | ಪ್ರಧಾನಿಗೆ ಸಲಹೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!
“ನಮಗೆ ಅವರು ಯಾರೆಂದೂ ಕೂಡಾ ತಿಳಿದಿರಲಿಲ್ಲ. ಪೊಲೀಸ್ ಠಾಣೆಯ ಹೊರಗೆ ದಿಗ್ಬಂಧನ ಇತ್ತು. ಆದರೆ ಅವರು ಪೊಲೀಸರ ಜೊತೆ ಗಲಾಟೆಗೆ ಇಳಿದರು. ಆದ್ದರಿಂದಾಗಿ ನಾವು ಅವರನ್ನು ಬಂಧನ ಮಾಡಿದ್ದೇವೆ. ಅವರು ಲಾಕ್‌ಅಪ್‌ನಲ್ಲಿದ್ದಾರೆ. ನಾವು ಅವನನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತೇವೆ. ಶಾಂತಿಯನ್ನು ಕಾಪಾಡಿಕೊಳ್ಳಲು ನಾವು ಅವರನ್ನು ಆರು ತಿಂಗಳ ಕಾಲ ಬಂಧಿಸುತ್ತೇವೆ” ಎಂದು ತಿಳಿಸಿದ್ದಾರೆ.
ಆದರೆ ಉಸ್ಮಾನ್ ಗನಿ ಅವರ ನಿವಾಸಕ್ಕೆ ಪೊಲೀಸ್ ವಾಹನವನ್ನು ಏಕೆ ಕಳುಹಿಸಲಾಗಿದೆ ಎಂಬುದನ್ನು ಎಸ್‌ಎಚ್‌ಒ ವಿವರಿಸಿಲ್ಲ. ಆದರೆ ಪೊಲೀಸ್ ಠಾಣೆಯಲ್ಲಿರುವ ಸಬ್ ಇನ್ಸ್‌ಪೆಕ್ಟರ್ ರಾಧೇಶ್ಯಾಮ್ ಅವರು, “ಅವರು (ಗಣಿ) ಕೆಲವು ಹೇಳಿಕೆಗಳನ್ನು ನೀಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಆದ್ದರಿಂದ ಸಿಆರ್‌ಪಿಸಿ 151 ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, “ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅವರು ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಹೇಳಿದ್ದರು. ಇದರರ್ಥ ಅವರು ಈ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವವರಿಗೆ, ನುಸುಳುಕೋರರಿಗೆ ಹಂಚುತ್ತಾರೆ. ಎಷ್ಟೆಂದರೆ ನಿಮ್ಮ ಮಂಗಳಸೂತ್ರವನ್ನು ಕೂಡಾ ಬಿಡುವುದಿಲ್ಲ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ’70 ಕೋಟಿ ಭಾರತೀಯರಿಗಿಂತ ಅಧಿಕ ಸಂಪತ್ತು 21 ಬಿಲಿಯನೇರ್‌ಗಳಲ್ಲಿದೆ ಅನ್ನೋದನ್ನ ಮೋದಿ ಹೇಳಲ್ಲ’
ಈ ಹೇಳಿಕೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಗನಿ ಅವರು, “ಮುಸ್ಲಿಂ ಆಗಿರುವ ನನಗೆ ಪ್ರಧಾನಿ ಹೇಳಿದ್ದಕ್ಕೆ ನಿರಾಶೆಯಾಗಿದೆ. ನಾನು ಬಿಜೆಪಿಗೆ ಮತ ಕೇಳಲು ಮುಸ್ಲಿಮರ ಬಳಿಗೆ ಹೋದಾಗ ಸಮುದಾಯದ ಜನರು ಈ ಹೇಳಿಕೆಯ ಬಗ್ಗೆ ನನ್ನಲ್ಲಿ ಪ್ರಶ್ನಿಸುತ್ತಾರೆ” ಎಂದಿದ್ದರು.
इस वीडियो के वायरल होने के बाद, बीकानेर भाजपा अल्पसंख्यक मोर्चा के अध्यक्ष उस्मान गनी भाजपा से निष्कासित। उन्हों ने वीडियो में कहा था प्रधान मंत्री मोदी को हिंदुस्तान के मुस्लालमाम पे अपमान नही करना चाहिए, डेवलपमेंट पे फोकस रखना चाहिए। इस सुझाव के लिए इन्हे टाटा वाई बाई बोल्डिया… pic.twitter.com/LJh4qSRkCf
— Mohammed Zubair (@zoo_bear) April 24, 2024
ಜೊತೆಗೆ “ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ” ಎಂದೂ ಹೇಳಿದ್ದರು.
ಆದರೆ ಅದಾದ ಬಳಿಕವೇ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದ ಗನಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈಗ ಪ್ರಧಾನಿ ಹೇಳಿಕೆಯನ್ನು ಟೀಕಿಸಿದ್ದಕ್ಕೆ ಬಂಧಿಸಲಾಗಿದೆ.
ಗನಿ ಅವರು ಎಬಿವಿಪಿ ಮತ್ತು ನಂತರ ಬಿಜೆಪಿಯೊಂದಿಗೆ ಸುಮಾರು 15-20 ವರ್ಷಗಳ ಕಾಲ ಸಂಬಂಧ ಹೊಂದಿದ್ದಾರೆ. ಕೆಲವು ತಿಂಗಳ ಹಿಂದೆ 2023ರ ವಿಧಾನಸಭೆ ಚುನಾವಣೆ ವೇಳೆ ಮೋದಿ ಜಿಲ್ಲೆಗೆ ಆಗಮಿಸಿದಾಗ ಬಿಕಾನೇರ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಿದ್ದರು.