ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ಇಂದು ನಿಧನರಾಗಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದ್ದು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ, ಗುರುವಾರ ಸಂಜೆ ದೆಹಲಿಯ ಏಮ್ಸ್(AIIMS) ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮನಮೋಹನ್ ಸಿಂಗ್ ಅವರು ರಾಜಕಾರಣಿ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ ಮತ್ತು ಅಧಿಕಾರಿಯಾಗಿದ್ದು, 2004ರಿಂದ 2014ರ ವರೆಗೆ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಭಾರತದ ಆರ್ಥಿಕ ಸುಧಾರಕ ಎಂದೇ ಸಿಂಗ್ ಹೆಸರು ಪಡೆದಿದ್ದರು.
ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932ರಲ್ಲಿ, ಗಾಹ್, ಪಶ್ಚಿಮ ಪಂಜಾಬ್(ಈಗ ಪಾಕಿಸ್ತಾನಕ್ಕೆ ಸೇರಿದೆ) ಎಂಬಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಸಿಂಗ್ ಅವರು ಚಿಕ್ಕವರಿದ್ದಾಗ ಅವರ ತಾಯಿ ನಿಧನರಾದರು. ಅವನ ತಂದೆಯ ಅಜ್ಜಿ ಅವರನ್ನು ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಉರ್ದು ಮಾಧ್ಯಮದಲ್ಲಿತ್ತು. ಅವರ ಪೋಷಕರು 1947ರಲ್ಲಿ ಭಾರತಕ್ಕೆ ವಲಸೆ ಬಂದಿದ್ದರು.
ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಕಾರ್ಯದರ್ಶಿಯಾಗಿ, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಹಣಕಾಸು ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರತಿಯೊಂದು ಹುದ್ದೆಯಲ್ಲೂ ‘ಸಿಂಗ್ ಸ್ಟೈಲ್ ಆಫ್ ವರ್ಕಿಂಗ್’ ಛಾಪು ಒತ್ತಿದರು. ಸಲ್ಲಿಸಿದ ಸೇವೆಯನ್ನು ಸ್ಮರಣೀಯಗೊಳಿಸಿದರು.
ಹೆಚ್ಚು ಮಾತನಾಡದ, ಮಾಡಿದ್ದನ್ನು ಹೇಳಿಕೊಳ್ಳದ ಮನಮೋಹನ್ ಸಿಂಗ್‌ರದು ರಾಜಕಾರಣಕ್ಕೆ ಒಗ್ಗದ ವ್ಯಕ್ತಿತ್ವ. ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಒತ್ತಡಕ್ಕೆ ಮಣಿದು ರಾಜಕಾರಣಿಯಾದ ಸಿಂಗ್, ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾದರು. ದೇಶದ ಸ್ಥಿತಿಗತಿಯನ್ನು ಅನುಭವದಿಂದ ಅರಿತಿದ್ದರು. ಗ್ರಾಮದಿಂದ ಗ್ಲೋಬಲ್‌ವರೆಗಿನ ಅರ್ಥಶಾಸ್ತ್ರವನ್ನು ಅಧ್ಯಯನದಿಂದ ಅರಗಿಸಿಕೊಂಡಿದ್ದರು. ಹಣಕಾಸು ಸಚಿವರಾದಾಗ, ತಮ್ಮ ವಿದ್ವತ್ತನ್ನೇ ನಿಕಷಕ್ಕೆ ಒಡ್ಡಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸಹಳಿಗೆ ತಂದರು. ಅವರ ಉದಾರೀಕರಣ ನೀತಿ ಅಂದು ಹಲವರ ಟೀಕೆಗೆ ಒಳಗಾಯಿತು.
ಮನಮೋಹನ್ ಸಿಂಗ್ ಎಂದೂ ನೇರವಾಗಿ ಚುನಾವಣೆ ಎದುರಿಸಿದವರಲ್ಲ. ಅವರು ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ, ಅಕ್ಟೋಬರ್ 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಅವರು ರಾಜ್ಯಸಭೆಯಲ್ಲಿ ಐದು ಅವಧಿಗೆ ಅಸ್ಸಾಂ, ಒಂದು ಬಾರಿ ರಾಜಸ್ಥಾನವನ್ನು ಪ್ರತಿನಿಧಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಬರಿ ಮಸೀದಿ ಕೆಡವಿದಾಗಲೇ ‘ಸಾಮರಸ್ಯ’ ಸಮಾಧಿಯಾಗಿತ್ತಲ್ಲವೇ?
92ರ ಹರೆಯದಲ್ಲೂ ಅವರು ಸಂಸತ್ತಿಗೆ ಗಾಲಿಕುರ್ಚಿಯಲ್ಲಿ ನಿಯಮಿತವಾಗಿ ಹಾಜರಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸದನ ಮಾತನಾಡಲು, ಚರ್ಚಿಸಲು ಮತ್ತು ಕಾನೂನು ರೂಪಿಸಲು ಜನಪ್ರತಿನಿಧಿಗಳಿಗೆ ವೇದಿಕೆಯಾದ ಉದಾಹರಣೆಗಳಿಲ್ಲ. ಬದಲಿಗೆ ಅಳತೆ ಮೀರಿದ ಮಾತಿಗೆ, ಭೋಪರಾಕಿಗೆ, ಕಾದಾಟಕ್ಕೆ ಕಣವಾಗುತ್ತಿದೆ. ಅಂತಹ ಸಮಯದಲ್ಲಿ ಮನಮೋಹನ್ ಸಿಂಗ್‌ರ ಹಾಜರಿ, ಅವರ ಬದ್ಧತೆಯ ಪ್ರತೀಕ. ಮೇಲ್ಮನೆಗೊಂದು ಮುಕುಟ. ಆಶ್ಚರ್ಯಕರ ಸಂಗತಿ ಎಂದರೆ, ಅವರು ಎಂದಿಗೂ ಧ್ವನಿ ಎತ್ತಲಿಲ್ಲ, ಸದನದ ಬಾವಿಯತ್ತ ಧಾವಿಸಲಿಲ್ಲ, ಸಭ್ಯತೆಯ ಎಲ್ಲೆ ಮೀರಲಿಲ್ಲ, ನಡವಳಿಕೆಯ ನಿಯಮಗಳನ್ನೂ ಉಲ್ಲಂಘಿಸಲಿಲ್ಲ.
ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಅಪರೂಪದ ಅರ್ಥಶಾಸ್ತ್ರಜ್ಞನಾಗಿದ್ದರೂ ಅಹಂ ತೋರಲಿಲ್ಲ. ಇಂತಹ ಸರಳ ಸಜ್ಜನನನ್ನು ಭಾರತದ ರಾಜಕಾರಣ ಕಂಡಿದ್ದಿಲ್ಲ. ಭಾರತ ಎಂದಿಗೂ ಮರೆಯಲಾರದ, ಮರೆಯಬಾರದ ವ್ಯಕ್ತಿ ಮನಮೋಹನ್ ಸಿಂಗ್.
ಸಿಎಂ ಸಿದ್ದರಾಮಯ್ಯ ಸಂತಾಪ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ.
ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
