ಅಬಕಾರಿ ನೀತಿಯನ್ನು ರೂಪಿಸಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಾರಣ. ಅವರಿಲ್ಲದೆ ಈ ಪ್ರಕರಣ ನಡೆದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ವಾದಿಸಿದೆ. ಸಿಸೋಡಿಯಾ ಅವರ ಎರಡನೇ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.
ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆಗ, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಇಡಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸುಮಾರು ಆರು ತಿಂಗಳುಗಳು ಕಳೆದಿವೆ. ಆದರೆ, ಪ್ರಕರಣದಲ್ಲಿ ಅವರ ವಿಚಾರಣೆ ಪೂರ್ಣಗೊಂಡಿಲ್ಲ. ಹೀಗಾಗಿ, ಅವರ ಪರ ವಕೀಲರು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಎರಡನೇ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇಡಿ ಪರ ವಾದ ಮಂಡಿಸಿದ ವಿಶೇಷ ವಕೀಲ ಜೊಹೆಬ್ ಹೊಸೈನ್, “ಆರೋಪಿ ಪರ ವಕೀಲರು ಜಾಮೀನು ಕೋರಲು ವಿಚಾರಣೆಯ ವಿಳಂಬವನ್ನು ಕಾರಣವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಳಂಬವು ಆರೋಪಿಗಳಿಂದ ಉಂಟಾಗುತ್ತಿದೆಯೇ ಹೊರತು, ಪ್ರಾಸಿಕ್ಯೂಷನ್‌ನಿಂದ ಅಲ್ಲ” ಎಂದು ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಅಪರಾಧವು ಸಿಸೋಡಿಯಾ ಇಲ್ಲದೆ ನಡೆದಿರಲು ಸಾಧ್ಯವಿಲ್ಲ. ಇಡಿ ಪ್ರಕಾರ, ಸಗಟು ಮದ್ಯ ವಿತರಕರು 581 ಕೋಟಿ ರೂಪಾಯಿಗಳ ನಿಗದಿತ ಶುಲ್ಕವನ್ನು ಗಳಿಸಿದ್ದಾರೆ. ಯಾಕೆಂದರೆ, ನೀತಿಯಲ್ಲಿ ಕಮಿಷನ್ಅನ್ನು (ವಿತರಣಾ ಶುಲ್ಕ) 5%ನಿಂದ 12%ಗೆ ಹೆಚ್ಚಿಸಲಾಗಿತ್ತು. ನಂತರ, ಆ ನೀತಿಯನ್ನು ರದ್ದುಗೊಳಿಸಲಾಯಿತು. ಹೊಸ ನೀತಿಯಿಂದಾಗಿ 338 ಕೋಟಿ ರೂ. ಹೆಚ್ಚುವರಿ ಲಾಭವಾಗಿದೆ” ಎಂದು ಹೇಳಿದ್ದಾರೆ.
ಈ ಆದಾಯದ ಆಧಾರದ ಮೇಲೆ ಇಡಿ ಮತ್ತೊಮ್ಮೆ ಸಿಸೋಡಿಯಾ ಜಾಮೀನು ಅರ್ಜಿಯನ್ನು ವಿರೋಧಿಸಿದೆ. ಪ್ರಕರಣದಲ್ಲಿ ಸಾಕ್ಷಿ ನಾಶವಾಗಿದೆ ಎಂದು ಹೊಸೈನ್ ವಾದಿಸಿದ್ದಾರೆ. “ಸಿಸೋಡಿಯಾ ಅವರ ನಿರ್ದೇಶನ ಮತ್ತು ವಿಶ್ವಾಸದೊಂದಿಗೆ ವಿಜಯ್ ನಾಯರ್ ಅವರು ಸೌತ್ ಗ್ರೂಪ್ ಮತ್ತು ಎಎಪಿ ನಡುವಿನ ಮಧ್ಯಮ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು” ಎಂದು ಹೊಸೈನ್ ಆರೋಪಿಸಿದ್ದಾರೆ.
“ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಾಗ ಹೆಚ್ಚುವರಿ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ, ನಿರ್ದಿಷ್ಟ ಮದ್ಯದ ಘಟಕಗಳ ಲಾಭಕ್ಕಾಗಿ ನೀತಿಯ ತಿರುಚುವಿಕೆ ಹಾಗೂ ರಾಜ್ಯದ ಬೊಕ್ಕಸಕ್ಕೆ ಹಲವಾರು ನೂರು ಕೋಟಿಗಳಷ್ಟು ನಷ್ಟ ಉಂಟುಮಾಡುವಲ್ಲಿ ಸಿಸೋಡಿಯಾ ಅವರ ಪಾತ್ರವಿದೆ” ಎಂದು ಇಡಿ ವಾದಿಸಿದ್ದಾರೆ.
ಶನಿವಾರ ಬೆಳಗ್ಗೆ ನ್ಯಾಯಾಲಯವು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿದೆ. ಏಪ್ರಿಲ್ 10 ರಂದು ಅವರ ಜಾಮೀನು ಅರ್ಜಿಯ ಕುರಿತು ಹೆಚ್ಚಿನ ವಿಚಾರಣೆ ನಡೆಸಲಿದೆ.
ಸಿಸೋಡಿಯಾ ಅವರನ್ನು 2023ರ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತು. ನಂತರ, ಅದೇ ವರ್ಷದ ಮಾರ್ಚ್‌ನಲ್ಲಿ ಇಡಿ ಅವರನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಸಿಸೋಡಿಯಾ ಅವರನ್ನು ‘ಪ್ರಮುಖ ಆರೋಪಿ’ಯೆಂದು ಹೆಸರಿಸಿದೆ.