- ಬಿ ಎಲ್ ಸಂತೋಷ್ ವಿರುದ್ದ ಗಂಭೀರ ಆರೋಪ ಮಾಡಿದ ಎಂ ಬಿ ಪಾಟೀಲ್
- ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಸಂತೋಷ್ ಅವರ ಆಜ್ಞಾಪಾಲಕರು
ಮಾಜಿ ಮುಖ್ಯಮಂತ್ರಿ, ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸಲು ಅವರ ವಿರುದ್ಧ ಹೊಂದಾಣಿಕೆ ರಾಜಕಾರಣ ಅಸ್ತ್ರ ಪ್ರಯೋಗ ಮಾಡಲಾಗಿದೆ. ಇದು ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ಕಾರ್ಯಾಚರಣೆಯ ಮುಂದುವರಿದ ಭಾಗ ಎಂದು ಸಚಿವ ಎಂ ಬಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ದ ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸುವ ಸಲುವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಪ್ರತಾಪ್ ಸಿಂಹ ಅವರ ಬಾಯಲ್ಲಿ ಹೊಂದಾಣಿಕೆ ರಾಜಕಾರಣದ ಬಾಣ ಬಿಡಿಸಿದ್ದೀರಾ ಎಂದು ಸಂತೋಷ್ ವಿರುದ್ದ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಂ ಬಿ ಪಾಟೀಲ್, ಬಿ ಎಲ್ ಸಂತೋಷ್ ನಡೆ ಖಂಡಿಸಿ, ಲೇವಡಿ ಮಾಡಿದ್ದಾರೆ. ಅವರ ಟ್ವೀಟ್ ಸಾರಾಂಶ ಹೀಗಿದೆ.
ಬಿ ಎಲ್ ಸಂತೋಷ್ ಅವರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ. ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಮರು ಮತಾಂತರಕ್ಕೆ ಸಾಮ, ದಾನ, ಭೇದ, ದಂಡ ಬಳಸಬೇಕಿದೆ: ಸಿ ಟಿ ರವಿ
ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮುಗಿಸಲು ಅವರ ವಿರುದ್ಧ ಬಸವನಗೌಡ ಪಾಟೀಲ್ ಅವರನ್ನು ಎತ್ತಿ ಕಟ್ಟಿ, ಜೊತೆಗೆ ನಿಮ್ಮ ಪಟ್ಟ ಶಿಷ್ಯ ಪ್ರತಾಪ್ ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿ ನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ.
ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ವಿಶ್ವೇಶ್ವರ ಭಟ್ ಹೇಳಿರುವ “ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ” ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ? ಎಂದು ಪ್ರಶ್ನಿಸಿದ್ದಾರೆ.