ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ಮಿತಿಮೀರಿದ ಶುಲ್ಕ ಮತ್ತು ಶೋಷಣೆ ತಡೆಗೆ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಸಿದ್ಧಾರ್ಥ್ ದಾಲ್ಮಿಯಾ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಇತ್ತೀಚೆಗೆ ಹೇಳಿದೆ.
ರೋಗಿಗಳು ತಮ್ಮಲ್ಲಿರುವ ಔಷಧಾಲಯಗಳಿಂದಲೇ ಹೆಚ್ಚಿನ ಬೆಲೆಗೆ ಔಷಧ ಮತ್ತು ವೈದ್ಯಕೀಯ ಸಾಮಗ್ರಿ ಖರೀದಿಸುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಒತ್ತಾಯಿಸುವುದನ್ನು ತಡೆಯುವುದಕ್ಕಾಗಿ ನಿರ್ದೇಶನ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಕೆಯಾಗಿತ್ತು.
ಅರ್ಜಿದಾರರ ಕುಟುಂಬ ಸದಸ್ಯರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅತಿಯಾದ ಶುಲ್ಕ ಪಾವತಿಸಬೇಕಾದ್ದರಿಂದ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದು ಆರ್ಥಿಕ ಶೋಷನೆಗೆ ಸಮ ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಆರೋಗ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು.
ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಮನಸೋಇಚ್ಛೆಯಾಗಿ ಶುಲ್ಕ ವಿಧಿಸುತ್ತಿದ್ದು, ಅವುಗಳ ಬಲವಂತದ ಕ್ರಮ ತಡೆಯಲು ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಕೋರಿದ್ದರು.
ಮಾರ್ಚ್ 4ರಂದು ವಿಚಾರರಣೆ ನಡೆಸಿದ ನ್ಯಾಯಾಲಯ, “ಖಾಸಗಿ ಆಸ್ಪತ್ರೆಗಳಿಗೆ ಕಡ್ಡಾಯ ನಿರ್ದೇಶನ ನೀಡುವ ಮೂಲಕ ಸುಪ್ರೀಂ ಕೋರ್ಟ್ ತಾನಾಗಿಯೇ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಹಾಗೆ ನಿರ್ದೇಶನ ನೀಡಿದರೆ, ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದ ನ್ಯಾಯಾಲಯ ಸಮಸ್ಯೆಯನ್ನು ರಾಜ್ಯ ನೀತಿಗಳ ಮೂಲಕ ನಿಭಾಯಿಸುವುದು ಸೂಕ್ತ” ಎಂದಿದೆ,
“ರೋಗಿಗಳು ಅಥವಾ ಅವರನ್ನು ಆರೈಕೆ ಮಾಡುತ್ತಿರುವವನ್ನು ಶೋಷಣೆಯಿಂದ ರಕ್ಷಿಸಲು ಅಂತೆಯೇ ಖಾಸಗಿ ಸಂಸ್ಥೆಗಳು ಆರೋಗ್ಯ ವಲಯಕ್ಕೆ ಪ್ರವೇಶಿಸುವುದನ್ನು ನಿರುತ್ಸಾಹಗೊಳಿಸುವಂತೆ ಮತ್ತು ಅಸಮಂಜಸ ನಿರ್ಬಂಧ ಹೇರದಂತೆ ನೋಡಿಕೊಳ್ಳುವುದಕ್ಕಾಗಿ ಸಮಗ್ರ ದೃಷ್ಟಿಕೂನ ಮತ್ತು ಅಗತ್ಯ ಮಾರ್ಗಸೂಚಿ ರೂಪಿಸಲು ನೀತಿ ನಿರೂಪಕರೇ ಸೂಕ್ತ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಲ್ಲರಿಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕಿನ ಮೂಲಭೂತ ಅಂಶ. ಆದರೆ ದೇಶದ ಅಗಾಧ ಜನಸಂಖ್ಯೆ ಹಿನ್ನೆಲೆಯಲ್ಲಿ ಸರ್ಕಾರ ವೈದ್ಯಕೀಯ ಮೂಲಸೌಕರ್ಯ ಕಲ್ಪಿಸಲು ಹೆಣಗಿದ ಪರಿಣಾಮ ಖಾಸಗಿ ಆಸ್ಪತ್ರೆಗಳ ಸೇವೆ ಆರಂಭವಾಗಿದೆ. ಖಾಸಗಿ ಆರೋಗ್ಯ ಸಂಸ್ಥೆಗಳ ಬೆಳವಣಿಗೆಗೆ ಅಡ್ಡಿಯಾಗಬಹುದಾದ ನಿರ್ದೇಶನ ನೀಡದಂತೆ ನೀತಿ ರೂಪಿಸಬೇಕಾಗಿರುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ” ಎಂದು ಸಲಹೆ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.