ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ತಮ್ಮ ರಾಜಕೀಯ ನಿಷ್ಠೆಯನ್ನು ಬದಲಾಯಿಸಿದ್ದಾರೆ. ಅವರು ಬಿಜೆಪಿ ಜೊತೆಗಿನ ಮೈತ್ರಿ ತೊರೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅದನ್ನೇ ಸತ್ಯವೆಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ನಿತೀಶ್ ಅವರು ಮತ್ತೆ ರಾಜೀನಾಮೆ ನೀಡಿಲ್ಲ. ಆ ಪೋಸ್ಟ್ ಸಂಪೂರ್ಣ ಸುಳ್ಳು ಮಾಹಿತಿಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ.
ವೈರಲ್ ಆದ ಪೋಸ್ಟ್ ವಾಸ್ತವಾಂಶವನ್ನು ಹುಡುಕಿದಾಗ, ವೈರಲ್ ಆಗುತ್ತಿರುವ ವಿಡಿಯೋ ಒಂದು ವರ್ಷ ಹಿಂದಿನದ್ದು ಎಂದು ಕಂಡುಬಂದಿದೆ. ಆ ವಿಡಿಯೋ ನಿತೀಶ್ ಅವರು ಮಹಾಘಟಬಂಧನ್ ಮೈತ್ರಿಯನ್ನು ತೊರೆದ ಸಂದರ್ಭದ್ದಾಗಿದೆ.
ಈ ಹಿಂದೆ, ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಜೆಡಿಯು ಹಾಗೂ ಆರ್‌ಜೆಡಿ ಒಳಗೊಂಡ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಆದರೆ, 2024ರ ಜನವರಿಯಲ್ಲಿ ಮೈತ್ರಿಕೂಟವನ್ನು ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದರು.

ಮಹಾಘಟಬಂಧನ್ ತೊರೆದು 2024ರ ಜನವರಿ 28ರಂದು ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. “ಇಂದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ. ನಾನು ಎಲ್ಲರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರಿಂದ ಈ ಪರಿಸ್ಥಿತಿ ಬಂದಿದೆ. ಇಂದು ಸರ್ಕಾರ ವಿಸರ್ಜನೆಯಾಗಿದೆ” ಎಂದು ಹೇಳಿದ್ದರು.
ಅವರು ಅಂದು ಮಾತನಾಡಿದ್ದ ವಿಡಿಯೋವನ್ನು ಕ್ರಾಪ್ ಮಾಡಿ, ತಿರುಚಿ ಈಗ ನಿತೀಶ್ ಕುಮಾರ್ ಮತ್ತೆ ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬಂದಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ.
ಆದರೆ, ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ಈಗ ಮತ್ತೆ ರಾಜೀನಾಮೆ ನೀಡಿಲ್ಲ. ಎನ್‌ಡಿಎ ಮೈತ್ರಿಯನ್ನೂ ತೊರೆದಿಲ್ಲ ಎಂಬುದು ಸತ್ಯ.
ಈ ವರದಿ ಓದಿದ್ದೀರಾ?: ಡೆಲ್ಲಿ ಪತ್ರಿಕೆಯಲ್ಲಿ ಮಂಡ್ಯದ ‘ಬಾಡೂಟ ಆಂದೋಲನ’ದ ಸದ್ದು-ಸುದ್ದಿ!