ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಬಿಜೆಪಿ ಸೇರಿದ್ದಾರೆ ಎಂಬ ಹೇಳಿಯೊಂದಿಗೆ ಪ್ರಧಾನಿ ಮೋದಿ ಮತ್ತು ಧೋನಿ ಇರುವ ಚಿತ್ರವೊಂದು ಹರಿದಾಡುತ್ತಿದೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವಾರು ನೆಟ್ಟಿಗರು ಧೋನಿ ಬಿಜೆಪಿ ಸೇರಿದ್ದಾರೆಂದು ನಂಬಿಸಿದ್ದು, ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಧೋನಿ ಬಿಜೆಪಿ ಸೇರಿಲ್ಲ. ವೈರಲ್ ಆಗುತ್ತಿರುವ ಚಿತ್ರವು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ಚಿತ್ರವಾಗಿದೆ ಎಂದು ಕಂಡುಬಂದಿದೆ.
ವೈರಲ್ ಪೋಸ್ಟ್ ಮತ್ತು ಚಿತ್ರ ಹೇಳುವುದೇನು?
ಪ್ರಧಾನಿ ಮೋದಿ ಜೊತೆ ಧೋನಿ ಇರುವ ಫೋಟೋವನ್ನು ಹಲವಾರು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಧೋನಿ ಮತ್ತು ಮೋದಿ ಬಿಜೆಪಿಯ ಚಿಹ್ನೆ ಇರುವ ಕೇಸರಿ ಶಾಲನ್ನು ಧರಿಸಿದ್ದಾರೆ. ಚಿತ್ರ ‘ಬ್ಯಾಕ್‌ಗ್ರೌಂಡ್’ನಲ್ಲಿ ಬಿಜೆಪಿಯ ಬ್ಯಾನರ್ ಕೂಡ ಇದೆ.
ಆಚಿತ್ರವನ್ನು ಹಂಚಿಕೊಂಡಿರುವ ಹಲವರು, ‘ಸಿಎಸ್‌ಕೆ ಆಟಗಾರ ಧೋನಿ ಬಿಜೆಪಿ ಸೇರಿದ್ದಾರೆ’, ‘ಎಂ.ಎಸ್ ಧೋನಿ ಬಿಜೆಪಿ ಸೇರಿದ್ದಾರೆ’ ಎಂದು ಹೇಳುತ್ತಿದ್ದಾರೆ.

ಸತ್ಯವೇನು?
ಫೋಟೋ ವೈರಲ್ ಆಗುತ್ತಿದ್ದಂತೆ, ಚಿತ್ರಕ್ಕೆ ಸಂಬಂಧಿದ ಕೀವರ್ಡ್‌ಗಳನ್ನು ಬಳಸಿ, ಅಂತರ್ಜಾಲದಲ್ಲಿ ಹುಡುಕಲಾಗಿದ್ದು, ಧೋನಿ ಬಿಜೆಪಿ ಸೇರಿದ್ದಾರೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಲ್ಲದೆ, ಪ್ರಧಾನಿ ಮೋದಿ ಅವರನ್ನು ಇತ್ತೀಚೆಗೆ ಧೋನಿಯನ್ನು ಭೇಟಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು, ವರದಿಗಳು ದೊರೆತಿಲ್ಲ.
ಈ ವರದಿ ಓದಿದ್ದೀರಾ?: ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?
ಇನ್ನು, ಚಿತ್ರವನ್ನು ತೀಕ್ಷ್ಣವಾಗಿ ಪರಿಶೀಲಿಸಿದರೆ, ಫೋಟೋದಲ್ಲಿ ಪ್ರಧಾನಿ ಮೋದಿ ಅವರ ಕನ್ನಡಕ ಸಂಪೂರ್ಣವಾಗಿ ಚಿತ್ರಣಗೊಂಡಿಲ್ಲ. ಮೋದಿ ಅವರ ಭುಜದ ಮೇಲಿನ ಕಮಲದ ಚಿಹ್ನೆಯು ಕೃತಕ ರೀತಿಯಲ್ಲಿದ್ದು, ಎಐ ತಂತ್ರಜ್ಞಾನದಿಂದ ರಚಿಸಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ, ಅದು ಎಐ ಬಳಸಿ, ಚಿತ್ರಸಲಾಗಿರುವ ಫೋಟೋ ಎಂಬುದು ದೃಢಪಟ್ಟಿದೆ.
ಸಾರಾಂಶ;
ಚಿತ್ರವನ್ನು ಕೃತಕ ಬುದ್ದಿಮತ್ತೆ ಬಳಸಿ ರಚಿಸಲಾಗಿದೆ. ಧೋನಿ ಬಿಜೆಪಿಗೆ ಸೇರಿಲ್ಲ ಅಥವಾ ಪ್ರಧಾನಿ ಮೋದಿಯವರನ್ನು ಇತ್ತೀಚೆಗೆ ಭೇಟಿ ಮಾಡಿಲ್ಲ ಎಂಬುದು ದೃಢ. ಇಂತಹ ಸುದ್ದಿಗಳನ್ನು ನಂಬುವುದಕ್ಕೂ ಮುನ್ನ ಜನರು ಎಚ್ಚರಿಕೆಯಿಂದ ಇರಬೇಕು. ಅಧಿಕೃತ ಮಾಹಿತಿಗಳನ್ನು ಪರಿಶೀಲಿಸಿ, ಸತ್ಯಾಸತ್ಯತೆಯನ್ನು ಗಮನಿಸಬೇಕು.