ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿ, ಪತ್ರಿಕಾ ವರದಿಯ ರೀತಿಯಲ್ಲಿ ಚಿತ್ರಿಸಿ ಅಪಪ್ರಚಾರ ಮಾಡಲಾಗಿದೆ. ಈ ಸುಳ್ಳನ್ನು ಬಿಜೆಪಿ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸುಳ್ಳು ಪ್ರಸಾರ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
”ಹಿಂದುಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಮರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದಾಗಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹರಿಬಿಡಲಾಗಿದೆ.
ಈ ಬಗ್ಗೆ, ಕಾಂಗ್ರೆಸ್‌ನ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ. “ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಇದು, ಮಾದರಿ ನೀತಿ ಸಂಹಿತೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.
“2024ರ ಏಪ್ರಿಲ್ 9 ಮತ್ತು 10ರಂದು ಬಿಜೆಪಿಗೆ ಸಂಬಂಧಿಸಿದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿಯ ನಕಲಿ ಪತ್ರಿಕಾ ತುಣುಕನ್ನು ಹಂಚಿಕೊಳ್ಳಲಾಗಿದೆ. ಆ ಸುಳ್ಳು ಸುದ್ದಿಯು ಕೋಮುವಾದಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಒಳಗೊಂಡಿದೆ. ಈ ಕೃತ್ಯವು ಸಾರ್ವಜನಿಕ ಗ್ರಹಿಕೆಯನ್ನು ವಿರೂಪಗೊಳಿಸುತ್ತದೆ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕುತ್ತದೆ” ಎಂದು ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಮೈಲೇಜ್ ಪಡೆಯಲು ಈ ಕಟ್ಟುಕಥೆಯ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ. ಈ ಸುಳ್ಳು ಸುದ್ದಿ ಸೃಷ್ಟಿಸಿದವರು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮತದಾರರ ಧ್ರುವೀಕರಣದ ಉದ್ದೇಶ ಹೊಂದಿದ್ದಾರೆ. ಈ ಕೃತ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇರವಾಗಿ ತೊಡಗಿರುವುದು ಬಿಜೆಪಿ ಉದ್ದೇಶಪೂರ್ವಕ ಕಾರ್ಯತಂತ್ರವನ್ನು ಎತ್ತಿ ತೋರಿಸುತ್ತದೆ. ಪ್ರಚಾರ ಮತ್ತು ಚುನಾವಣಾ ಲಾಭಕ್ಕಾಗಿ ಸಾಮಾಜಿಕ ವಿಭಜನೆಗೆ ಮುಂದಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ನಿರ್ದೇಶನದಂತೆ ವಾಟ್ಸಾಪ್ ಗುಂಪುಗಳನ್ನು ರಚಿಸುತ್ತಾರೆ. ಆ ಗುಂಪುಗಳನ್ನು ತಮ್ಮ ಎದರಾಳಿಗಳ ವಿರುದ್ಧ ಸುಳ್ಳು, ಅಪಪ್ರಚಾರಕ್ಕಾಗಿ ಬಳಸಲಾಗುತ್ತದೆ. ಇಂತಹ ನಿಂದನೆಯ ಕೃತ್ಯಗಳು ಕೇವಲ ಮಾದರಿ ನೀತಿ ಸಂಹಿತೆಯನ್ನು ಮಾತ್ರ ಉಲ್ಲಂಘಿಸುವುದಿಲ್ಲ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಐಪಿಸಿ ಸೆಕ್ಷನ್ 153ಎ (ಧರ್ಮ ಅಥವಾ ಸಮುದಾಯದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನ ಮತ್ತು ಶಾಂತಿ ಭಂಗಕ್ಕೆ ಯತ್ನ) ಅಡಿಯಲ್ಲಿ ಅಪರಾಧವಾಗಿದೆ” ಎಂದು ಹೇಳಿದ್ದಾರೆ.
“ಪ್ರಚೋದಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ವಿಷಯವನ್ನು ಹರಡಿದ್ದಕ್ಕಾಗಿ ಬಿಜೆಪಿ ವಿರುದ್ಧ ಐಪಿಸಿ ಸೆಕ್ಷನ್ 153ಎ, 504, ಮತ್ತು 505(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69[ಎ] ಮತ್ತು 79(3)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.