ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿ, ಸುದ್ದಿಪತ್ರಿಕೆಯ ರೀತಿಯಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ 7 ಮಂದಿ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
“ಹಿಂದುಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಂರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಚಿತ್ರಿಸಿ, ಬಿತ್ತರಿಸಲಾಗಿತ್ತು. ಈ ಬಗ್ಗೆ ಹರೀಶ್ ನಾಗರಾಜು ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಅವರ ದೂರಿನ ಆಧಾರದ ಮೇಲೆ ಬೆಂಗಳೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66, 66ಸಿ ಮತ್ತು 66ಡಿ ಹಾಗೂ ಐಪಿಸಿ ಸೆಕ್ಷನ್ 153ಎ, 120ಬಿ, 419, 469, 471, 505(2) ಮತ್ತು 468ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿಗಳನ್ನು ಪ್ರಭಾಕರ್, ವಸಂತ್ ಗಿಳಿಯಾರ್, ವಿಜಯ್ ಹೆರಗು, ಪಾಂಡು ಮೋದಿಕ ಎಂದು ಗುರುತಿಸಲಾಗಿದೆ. ಅಲ್ಲದೆ, ಬಿಜೆಪಿ ಸಪೋಟರ್ಸ್, ದಾವಣಗೆರೆ ಬಿಜೆಪಿ ಹಾಗೂ ದಾತ್ರಿ ಗೋಶಾಲೆ ಗೋಳೂರು ಎಂಬ ಫೇಸ್‌ಬುಕ್ ಪುಟಗಳ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ
ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು” ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.