ಟಿಆರ್‌ಪಿ ದಾಹ ಮತ್ತು ಕಾಂಗ್ರೆಸ್ ವಿರುದ್ಧದ ನಿರಂತರ ಸುದ್ದಿ ಮಾಡುತ್ತಿರುವ ಗೋದಿ ಮಾಧ್ಯಮಗಳು ನಾನಾ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ, ಆಗಾಗ್ಗೆ ಮುಜುಗರಕ್ಕೆ ಒಳಗಾಗುತ್ತಲೇ ಇವೆ. ಅಂತಹದ್ದೇ ಸುಳ್ಳು ಸುದ್ದಿಯೊಂದನ್ನು ಕಾಂಗ್ರೆಸ್ ವಿರುದ್ಧ ಪ್ರಸಾರ ಮಾಡಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಬಳಿಕ, ತಮ್ಮ ದುರುದ್ದೇಶಪೂರಿತ ಯಡವಟ್ಟಿಗೆ ಕ್ಷಮೆಯಾಚಿಸಿದ್ದಾರೆ.
ಹಾರಾಟ, ಕಿರುಚಾಟ, ಅರುಚಾಟಕ್ಕೇ ಹೆಸರಾಗಿರುವ ಅರ್ನಬ್ ಗೋಸ್ವಾಮಿ ಸುಳ್ಳುಗಳನ್ನೂ ಸತ್ಯವೆಂಬಂತೆ ವಾದಿಸುವುದರಲ್ಲಿಯೂ ನಿಸ್ಸೀಮರಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಿದ್ದರು. ಟರ್ಕಿಯ ಇಸ್ತಾನಬುಲ್‌ನಲ್ಲಿರುವ ‘ಇಸ್ತಾನಬುಲ್ ಕಾಂಗ್ರೆಸ್ ಸೆಂಟರ್’ಅನ್ನು ಭಾರತದ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಹೇಳಿದ್ದರು. ಅಲ್ಲದೆ, ಇಸ್ತಾನಬುಲ್‌ನಲ್ಲಿ ಕಾಂಗ್ರೆಸ್ ಕಚೇರಿ ಯಾಕೆ ಇದೆ ಎಂದು ಪ್ರಶ್ನೆ ಮಾಡಿದ್ದರು.
ಅವರು ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದು ಹೀಗೆ; “ಟರ್ಕಿಯಲ್ಲಿ ಕಾಂಗ್ರೆಸ್ ಪಕ್ಷದ ನೋಂದಾಯಿತ ಕಚೇರಿ ಇದೆ. ವೀಕ್ಷಕರೇ ನಿಮಗೆ ಗೊತ್ತಾ? ಕಾಂಗ್ರೆಸ್ ತನ್ನ ರಿಜಿಸ್ಟರ್ ಆಫೀಸ್‌ಅನ್ನು ಟರ್ಕಿಯಲ್ಲಿ ಹೊಂದಿದೆ. ಮೊಹಮ್ಮದ್ ಯೂಸುಫ್ ಖಾನ್ ಅವರು ಈ ಕಚೇರಿಯ ಮ್ಯಾನೆಜ್‌ಮೆಂಟ್ ನೋಡಿಕೊಳ್ಳಲು ನೇಮಕವಾಗಿದ್ದಾರೆ” ಎಂದು ಆರೋಪಿಸಿದ್ದರು.
ಗೋಸ್ವಾಮಿ ಅವರ ಈ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡ ಬಿಜೆಪಿ ನಾಯಕ ಅಮಿತ್ ಮಾಳವೀಯ, “ನಿಮಗೆ ಗೊತ್ತಾ? ಕಾಂಗ್ರೆಸ್ ಪಕ್ಷವು ತನ್ನ ಕಚೇರಿಯನ್ನು ಟರ್ಕಿಯಲ್ಲಿ ಹೊಂದಿದೆ. ಇದು ಕೂಡ ರಿಜಿಸ್ಟರ್ ಆಗಿದೆ. ರಾಹುಲ್ ಗಾಂಧಿ ಈ ಬಗ್ಗೆ ವಿವರಣೆ ನೀಡಬಹುದಾ? ಟರ್ಕಿಯಲ್ಲಿ ಕಚೇರಿ ಹೊಂದುವ ಅವಶ್ಯಕತೆ ಏನಿತ್ತು. ಈ ಬಗ್ಗೆ ಭಾರತ ತಿಳಿದುಕೊಳ್ಳಬೇಕಾಗಿದೆ. ಟರ್ಕಿ ನಮ್ಮ ಶತ್ರುವಾಗಿ ನಿಂತಿದೆ. ಶತ್ರುವಿನ ಮಿತ್ರ ಶತ್ರುವೇ” ಎಂದು ಹೇಳಿದ್ದಾರೆ.
Arnab Goswami and Republic TV personify the ‘low and dishonest decade’ which has seen the transformation of a significant section of Indian society into mindless zombies, who consume the propaganda they are fed, without thinking.
— Yusuf A Ahmad Ansari یوسف انصاری (@yusufpore) May 21, 2025
The @INCIndia and other Opposition parties must… pic.twitter.com/F0sJNpIzkY
ಆದರೆ, ಟರ್ಕಿಯಲ್ಲಿರುವ ‘ಇಸ್ತಾನಬುಲ್ ಕಾಂಗ್ರೆಸ್ ಸೆಂಟರ್’ಗೂ ಭಾರತದ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವೇ ಇಲ್ಲ. ಅದು ಟರ್ಕಿಯ ಸ್ಥಳೀಯ ಸಂಸ್ಥೆ. ಟರ್ಕಿಗೂ ಭಾರತದ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ, ಟರ್ಕಿಯಲ್ಲಿ ಕಾಂಗ್ರೆಸ್‌ನ ಕಚೇರಿ ಇದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರು. ನಾಗರಿಕರಿಗೆ, ವೀಕ್ಷಕರಿಗೆ ಸತ್ಯ ತಿಳಿಸುವ ವೃತ್ತಿಯಲ್ಲಿರುವ ಅರ್ನಬ್ ಗೋಸ್ವಾಮಿ ಅವರು ಕಾಂಗ್ರೆಸ್‌ಅನ್ನು ಟೀಕೆ ಮಾಡುವ ಭರದಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಅಂದಹಾಗೆ, ‘ಇಸ್ತಾನಬುಲ್ ಕಾಂಗ್ರೆಸ್ ಸೆಂಟರ್’ ಕಾಂಗ್ರೆಸ್ ಕಚೇರಿಯೂ ಅಲ್ಲ. ಅದು ಯಾವುದೇ ಪಕ್ಷದ್ದೂ ಅಲ್ಲ. ಅದೊಂದು ಟರ್ಕಿಯ ಸಭಾಂಗಣ ಅಷ್ಟೇ. ಆದರೆ, ಗೋದಿ ಮೀಡಿಯಾಗಳು ತಮ್ಮ ಪತ್ರಿಕಾವೃತ್ತಿಯನ್ನು ಮರೆತು ಸುಳ್ಳು ಹಬ್ಬಿಸುವುದರಲ್ಲಿ ನಾಮುಂದು-ತಾಮುಂದು ಅಂತ ಪೈಪೋಟಿಗೆ ಇಳಿದಿವೆ. ‘ಇಸ್ತಾನಬುಲ್ ಕಾಂಗ್ರೆಸ್ ಸೆಂಟರ್’ ಎಂಬ ಹೆಸರಿನ ಸಭಾಂಗಣವನ್ನು ಕಾಂಗ್ರೆಸ್ ಕಚೇರಿ ಎಂದು ಅರ್ನಬ್ ಗೋಸ್ವಾಮಿ ಅವರು ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ.
ಹಾಗೆನೋಡಿದರೆ, ಕಾಂಗ್ರೆಸ್ ಎಂಬ ಪದದ ಅರ್ಥ ಸಮಾವೇಶ, ಸಭೆ, ಜನರನ್ನು ಒಗ್ಗೂಡಿಸು ಎಂದರ್ಥ. ಕಾಂಗ್ರೆಸ್ ಎಂಬ ಹೆಸರನ್ನು ಇಟ್ಟುಕೊಂಡಿರುವ ಸಭಾ ಕೇಂದ್ರಗಳು ಜಗತ್ತಿನಲ್ಲೆಡೆ ಇವೆ. ಉದಾಹರಣೆಗೆ, ಜರ್ಮನಿಯಲ್ಲಿ ಬೋನ್ ಕಾಂಗ್ರೆಸ್ ಸೆಂಟರ್, ಅಮೆರಿಕದಲ್ಲಿ ಫಿಲಡೆಲ್ಫಿಯಾ ಕಾಂಗ್ರೆಸ್ ಹಾಲ್, ಫ್ರಾನ್ಸ್ ನಲ್ಲಿ ಪ್ಯಾರಿಸ್ ಕಾಂಗ್ರೆಸ್ ಸೆಂಟರ್, ಜಪಾನ್ ನಲ್ಲಿ ಟೋಕಿಯೋ ಕಾಂಗ್ರೆಸ್ ಸೆಂಟರ್, ಬ್ರೆಜಿಲ್ ನಲ್ಲಿ ಸಾವೊ ಪೌಲೊ ಕಾಂಗ್ರೆಸ್ ಸೆಂಟರ್, ಚೀನಾದಲ್ಲಿ ಬೀಜಿಂಗ್ ಕಾಂಗ್ರೆಸ್ ಸೆಂಟರ್ ಇವೆ.
ಇವುಗಳೆಲ್ಲವೂ ‘ಕಾಂಗ್ರೆಸ್’ ಎಂಬ ಪದವನ್ನ ಬಳಸಿವೆ. ಆದರೆ, ಇವುಗಳಿಗೂ ಮತ್ತು ಭಾರತದ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇವುಗಳು ಸಾಮಾನ್ಯವಾಗಿ ಸಭೆಗಳು ಮತ್ತು ಸಮ್ಮೇಳನಗಳಿಗೆ ಬಳಸಲಾಗುವ ಸಭಾಕೇಂದ್ರಗಳಾಗಿವೆ.
ಈ ವರದಿ ಓದಿದ್ದೀರಾ?: ಸಂವಿಧಾನವೇ ಸುಪ್ರೀಂ: ಧನಕರ್‌ಗೆ ಸಿಜೆಐ ಪವರ್‌ಫುಲ್ ಕ್ಲಾಸ್
ಆದರೆ, ಗೋಸ್ವಾಮಿ ಅವರ ಸುಳ್ಳು ಮಾಹಿತಿಯನ್ನೇ ನಂಬಿ, ಬಿಜೆಪಿ ಮತ್ತು ಮೋದಿ ಭಕ್ತರು, ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್‌ನ ಚಿತ್ರವನ್ನು ಕಾಂಗ್ರೆಸ್ ಪಕ್ಷದ ಕಚೇರಿ, ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಯಲ್ಲಿ ಕಾಂಗ್ರೆಸ್ ತನ್ನ ಕಚೇರಿಯನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ದೇಶದ್ರೋಹಿ ಪಕ್ಷ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿ, ಪೋಸ್ಟ್ ಮಾಡಿದ್ದಾರೆ.
ಆದರೆ, ಈಗ ಸತ್ಯ ಹೊರಬಂದಿದೆ. ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ, ಗೋದಿ ಮೀಡಿಯಾಗಳು ಹಾಗೂ ಮೋದಿ ಭಕ್ತರು ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಅಪಹಾಸ್ಯಕ್ಕೀಡಾಗಿದ್ದಾರೆ. ಸಾಮಾನ್ಯ ಜ್ಞಾನದ ಅರಿವಿಲ್ಲದೇ ಇರುವ ಅರ್ನಬ್ ಗೋಸ್ವಾಮಿ ಮುಂದೊಂದು ದಿನ ಅಮೆರಿಕ ಕಾಂಗ್ರೆಸ್ (ಅಮೆರಿಕ ಸಂಸತ್ತು)ಅನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಎಂದು ಹೇಳಿ ಸುದ್ದಿ ಮಾಡಬಹುದು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಟ್ರೋಲ್‌ಗೆ ಗುರಿಯಾದ ಗೋಸ್ವಾಮಿ ಇದೀಗ ಕ್ಷಮೆಯಾಚಿಸಿದ್ದಾರೆ.