- ‘ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ’
- ‘ಡಿಕೆ ಶಿವಕುಮಾರ್‌ಗೆ ಯಾವೊಬ್ಬ ಶಾಸಕನೂ ಸ್ವಾಗತ ಕೋರಲಿಲ್ಲ’
ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ಆರ್ ಆರ್ ನಗರದ ಬಿಜೆಪಿ ಶಾಸಕ ಎನ್ ಮುನಿರತ್ನ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ ಎದ್ದಿದೆ. ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಜಿಲ್ಲೆಗೆ ಆಗಮಿಸಿದ್ದರೂ ಯಾವೊಬ್ಬ ಶಾಸಕನೂ ಸ್ವಾಗತ ಕೋರಲು ಆಗಮಿಸಿಲ್ಲ” ಎಂದರು.
“ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಮತ್ತಷ್ಟು ಆಶ್ಚರ್ಯ ತಂದಿದೆ. ಇದು ಎಂಟನೇ ಅದ್ಭುತ. ಸತೀಶ್ ಜಾರಕಿಹೊಳಿ ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ” ಎಂದು ಕಿಚಾಯಿಸಿದರು.
“ಬೆಳಗಾವಿ ಜಿಲ್ಲಾ ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ಕಾವೇರಿ ನೀರು ಉಕ್ಕಿ ಹರಿಯುವ ರೀತಿಯಲ್ಲಿ ಅಲ್ಲಿ ಉಕ್ಕಿ ಹರಿಯುತ್ತಿದೆ. ಈ ಹಿಂದೆ ಇದೇ ರೀತಿ ಅಲ್ಲಿ ಉಕ್ಕಿ ಹರಿದು ಮೈತ್ರಿ ಸರ್ಕಾರ ಪತನ ಆಗಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬೆಳಗಾವಿಯಿಂದ ಕದನ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಮುಕ್ತಾಯ ಆಗಲಿದೆ” ಎಂದರು.
ಆಪರೇಷನ್ ಕಮಲದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ ಆರೋಪದ ಬಗ್ಗೆ ಮುನಿರತ್ನ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನಾಯಕರು ನೆಮ್ಮದಿಯಾಗಿ ಆಡಳಿತ ಮಾಡಲಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಲಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದರೆ ಈಗ ಕಾಂಗ್ರೆಸ್ನವರೇ ಸರ್ಕಾರ ಬೀಳಿಸಲು ಕೈ ಹಾಕಿದ್ದಾರೆ. ದೇವಾನುದೇವತೆಗಳು ನಮಗೆ ತಥಾಸ್ತು ಅಂದರೆ ನಾವಂತೂ ಸುಮ್ಮನಿರಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ
ರಕ್ತದ ಬಲಿ ಕೊಡಿ ಅನ್ನೋ ಉದ್ದೇಶನಾ?
ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಕುಂಬಳಕಾಯಿ, ಅರಿಶಿನ ಕುಂಕುಮ ಬಳಸದಂತೆ ಸರ್ಕಾರಿ ಆದೇಶ ವಿಚಾರವಾಗಿ ಮಾತನಾಡಿದ ಅವರು, “ಕುಂಬಳಕಾಯಿ ಒಡೆಯುವುದು ತಪ್ಪು, ಕುರಿ, ಕೋಳಿ ಕಡಿಯಿರಿ ಅಂತ ಆದೇಶ ಇರಬೇಕು. ಅವರು ಹೊರಡಿಸಿರುವ ಆದೇಶ ಮಿಸ್ಟೇಕ್ ಆಗಿದೆ” ಎಂದರು.
“ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧಕ್ಕೆ ದೀಪ ಹಚ್ಚಿ, ಕುಂಬಳಕಾಯಿ ಒಡೆದೇ ಪ್ರವೇಶ ಮಾಡಿದ್ದರು. ಆ ಜಾಗದಲ್ಲೇ ಇವತ್ತು ಅರಿಶಿನ ಕುಂಕುಮ ಬೇಡ, ಕುಂಬಳಕಾಯಿ ಬೇಡ ಅಂತಾರಲ್ಲಾ ಇವರು? ಕಾಂಗ್ರೆಸ್ ಬಂದಿದೆ, ಕುಂಬಳಕಾಯಿ ಬೇಡ ರಕ್ತದ ಬಲಿ ಕೊಡಿ ಅನ್ನೋ ಉದ್ದೇಶನಾ? ಕೆಂಗಲ್ ಹನುಮಂತಯ್ಯ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡುತ್ತೇವೆ ಅನ್ನೋದು ಇವರ ಉದ್ದೇಶ ಇರಬೇಕು” ಎಂದು ಕುಟುಕಿದರು.
ಸಿಎಂ ಇಬ್ರಾಹಿಂ ಔಟ್ ಡೇಟೆಡ್
ಸಿಎಂ ಇಬ್ರಾಹಿಂ ಮೂವಿ ಯಾರೂ ನೋಡಲ್ಲ, ಔಟ್ ಡೇಟೆಡ್ ಹೀರೋ ಅವರು. ದೇವೇಗೌಡರು ನನ್ನ ದೇವರು, ಹಾರ್ಟ್, ಕಿಡ್ನಿ, ಕುಮಾರಸ್ವಾಮಿ ನನ್ನ ಉಸಿರು ಅಂತ ಹೇಳಿದ ವ್ಯಕ್ತಿ ಇಬ್ರಾಹಿಂ. ಈಗ ದೇವೇಗೌಡರ ಪಕ್ಷಕ್ಕೆ ವಾರಸುದಾರ ಆಗಲು ಹೋಗುತ್ತಿದ್ದಾರೆ. ದೇವೇಗೌಡರ ಶ್ರಮ, ಪಕ್ಷ ಕಟ್ಟಲು ಹರಿಸಿದ ಬೆವರ ಹನಿ ಎಷ್ಟಿದೆ ಎಲ್ಲರಿಗೂ ಗೊತ್ತು. ಆವತ್ತು ರಾಮಕೃಷ್ಣ ಹೆಗಡೆ ಅವರನ್ನು ಸಸ್ಪೆಂಡ್ ಮಾಡಲು ಇದೇ ಇಬ್ರಾಹಿಂ ತಾನೇ ಕಾರಣ?” ಎಂದು ಹರಿಹಾಯ್ದರು.