- ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ
- ‘ಗುತ್ತಿಗೆದಾರನ ಆತ್ಮಹತ್ಯೆ’ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರಿನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡದ್ದನ್ನು ‘ಗುತ್ತಿಗೆದಾರನ ಆತ್ಮಹತ್ಯೆ’ ಎಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್‌ನ ನಿಯೋಗವೊಂದು ಪೊಲೀಸರಿಗೆ ದೂರು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದ ಜನತೆಗೆ ಸುಳ್ಳು ಅಪಪ್ರಚಾರ, ಆಧಾರ ರಹಿತ ಆರೋಪಗಳ ಮೂಲಕ ವದಂತಿಯನ್ನು ರವಾನಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಗುತ್ತಿಗೆದಾರ, ಇದಕ್ಕೆ ಸರ್ಕಾರವೇ ಕಾರಣ ಎಂದು ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಇವರ ವಿರುದ್ದ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ನಿಯೋಗವು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ಆ.10ರಂದು ಅತ್ತಿಗುಪ್ಪೆ ವ್ಯಾಪ್ತಿಯಲ್ಲಿ ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈತ ಗುತ್ತಿಗೆದಾರ ಅಲ್ಲ ಎಂದು ಅವರ ಕುಟುಂಬಸ್ಥರೇ ಸ್ಪಷ್ಟಪಡಿಸಿದ್ದಾರೆ, ಆದರೂ ಕೂಡ ನಳಿನ್ ಕುಮಾರ್ ಕಟೀಲ್ ರವರು ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳ ಮೂಲಕ ಸರ್ಕಾರದ ವಿರುದ್ಧ ಆಧಾರರಹಿತ ಆರೋಪವನ್ನು ಮಾಡುವ ಮೂಲಕ ಸುಳ್ಳು ವದಂತಿಗಳನ್ನು ಹಬ್ಬಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಜನರ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.
ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಅಪಪ್ರಚಾರ ಮಾಡಿರುವ ಹಾಗೂ ಸುಳ್ಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 191ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಏನಿದು ಘಟನೆ?
ನಿನ್ನೆ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಅವರ ಪುತ್ರ ಗೌತಮ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಜೆ ಟ್ವೀಟ್ ಮಾಡಿದ್ದ ನಳಿನ್ ಕುಮಾರ್ ಕಟೀಲ್, ಇದು ಜೀವ ತೆಗೆಯುವ ಸರ್ಕಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರ, ನೌಕರನ ಆತ್ಮಹತ್ಯೆ ಎಂದು ಪ್ರತಿ ದಿನ ಕೇಳುತ್ತಲೇ ಇದ್ದೇವೆ. ಇಂದು ಬಿಬಿಎಂಪಿ ಗುತ್ತಿಗೆದಾರನ ಆತ್ಮಹತ್ಯೆ. ಕಾಮಗಾರಿಯ ಬಿಲ್ ಕೇಳಿದ್ದಕ್ಕೆ ಬೇಜವಾಬ್ದಾರಿಯ ಮಾತನಾಡಿದ ಡಿಕೆ ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ. ಕಾಂಗ್ರೆಸ್ಸಿಗರೇ, ಇನ್ನೆಷ್ಟು ಬಲಿ ಬೇಕು? ಎಂದು ಮಾಧ್ಯಮವೊಂದರಲ್ಲಿ ಬಂದಿದ್ದ ವಿಡಿಯೋ ಹಾಕಿದ್ದರು.
ಆದರೆ ಆತ ಗುತ್ತಿಗೆದಾರ ಆಗಿರಲಿಲ್ಲ ಎಂದು ಗೌತಮ್ ತಂದೆ ದೊಡ್ಡಯ್ಯನವರು ಹೇಳಿಕೆ ನೀಡಿದ್ದಾರೆ. ‘ಆತ ಯಾವುದೇ ಕಂಟ್ರಾಕ್ಟರ್ ಕೆಲಸ ಮಾಡುತ್ತಿರಲಿಲ್ಲ. ಕಳೆದ 3-4 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ನಮಗೂ ಗೊತ್ತಿಲ್ಲ’ ಎಂದು ಸ್ಪಷ್ಟೀಕರಣ ನೀಡಿದ್ದರು.