ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯತೆ ಬಗ್ಗೆ ಆರೋಪ ಪಟ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ಪ್ರಚಾರ ಮಾಡಿರುವ ಬಿಜೆಪಿ ವಿರುದ್ಧ ಬೆಂಗಳೂರಿನ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಮೂಲಕ ದೂರು ದಾಖಲಿಸಲು ಸರ್ಕಾರ ನಿರ್ಧರಿಸಿದ್ದು, ಬಿ.ಎಸ್. ಪಾಟೀಲ್, ಸರ್ಕಾರಿ ಅಭಿಯೋಜಕರು 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬೆಂಗಳೂರು ಮತ್ತು ಶೈಲಜಾ ನಾಯಕ್, ಸರ್ಕಾರಿ ಅಭಿಯೋಜಕರು, 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಬೆಂಗಳೂರು ಇವರುಗಳನ್ನು ಪ್ರಕರಣ ನಿರ್ವಹಿಸಲು ನಿಯೋಜಿಸಿದೆ.
ಅಲ್ಲದೇ ಕುಮಟಾ ಪ್ರಕಾಶ್, ಸರ್ಕಾರದ ಉಪ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಇವರನ್ನು ಈ ಪ್ರಕರಣದಲ್ಲಿ ಎಲ್ಲ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಭಿಯೋಜಕರಿಗೆ ಸಂಪೂರ್ಣ ದಾಖಲೆ, ಮಾಹಿತಿ ನೀಡಲು ಇವರನ್ನು ನೇಮಿಸಿ ಆದೇಶಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ವಿಜಯೇಂದ್ರ ಆಕ್ಷೇಪ
“ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಲು ಭಾರತದದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ಇತಿಹಾಸ ಕಾಂಗ್ರೆಸ್ ಪಕ್ಷದ್ದು. ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ವಿರೋಧ ಪಕ್ಷವನ್ನು ದಮನ ಮಾಡಲು ವಿರೋಧಿ ರಾಜಕೀಯ ನೇತಾರರು ಹಾಗೂ ಪ್ರಮುಖರನ್ನು ಜೈಲಿಗೆ ತಳ್ಳಿದ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಸರ್ಕಾರದ ಆದೇಶ ಪ್ರತಿಯನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿರುವ ಅವರು, “ತುರ್ತು ಪರಿಸ್ಥಿತಿ ಹೆಸರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಬೀಗ ಜಡಿದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂವಿಧಾನದ ಆಶಯದ ಮೇಲೆ ಅಟ್ಟಹಾಸ ಮೆರೆದ ಇತಿಹಾಸ ಕಾಂಗ್ರೆಸ್ ಪಕ್ಷದ್ದು. ಅಧಿಕಾರಕ್ಕೆ ಬಂದಾಗಲೆಲ್ಲಾ ಪಾಳೆಗಾರಿಕೆ ಗುಂಗಿನಲ್ಲಿ ವರ್ತಿಸುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ ನಿರಂಕುಶ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದಾರೆ” ಎಂದಿದ್ದಾರೆ.
“ಸರಣಿ ಭ್ರಷ್ಟಾಚಾರಗಳು, ಅಭಿವೃದ್ಧಿ ಶೂನ್ಯ ಆಡಳಿತವನ್ನು ಪ್ರಶ್ನಿಸಿ ಹೋರಾಡುತ್ತಿರುವ ವಿರೋಧ ಪಕ್ಷಗಳನ್ನು ಈವರೆವಿಗೂ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಬೆದರಿಸುತ್ತಿದ್ದ ಕಾಂಗ್ರೆಸ್, ವಿಧಾನ ಸಭೆಯ ಅಧ್ಯಕ್ಷರನ್ನು ಬಳಸಿಕೊಂಡು ವಿರೋಧ ಪಕ್ಷದ 18 ಸದಸ್ಯರನ್ನು ಸುದೀರ್ಘ ಅವಧಿಗೆ ಅಮಾನತ್ತು ಮಾಡಿ ಸಭಾಧ್ಯಕ್ಷ ಪೀಠವನ್ನು ತನ್ನ ಸರ್ವಾಧಿಕಾರತನ ಪ್ರದರ್ಶಿಸಲು ಬಳಸಿಕೊಂಡಿತ್ತು. ಇದೀಗ ಸಾಧನೆಯ ಹೆಸರಿನಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಲು ಹೊರಟು ಬರಿದಾಗಿರುವ ಬೊಕ್ಕಸವನ್ನು ಮತ್ತಷ್ಟು ಬರಿದು ಮಾಡಲು ದುಂದುವೆಚ್ಚದಲ್ಲಿ ‘ಸಾಧನ ಸಮಾವೇಶ’ ಮಾಡಲು ಹೊರಟ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಮಾಧ್ಯಮಗಳ ಮೂಲಕ ಜಾಹಿರಾತು ಬಿಡುಗಡೆ ಮಾಡಿದರೆ ಅದರಿಂದ ವಿಚಲಿತಗೊಂಡು ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದೆ” ಎಂದು ಹೇಳಿದ್ದಾರೆ.
“ಸರ್ಕಾರದ ವ್ಯವಸ್ಥೆ ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮದವರನ್ನು ಬೆದರಿಸುವ ಕರಾಳ ಅಧಿಸೂಚನೆ ಹೊರಡಿಸಿದೆ. ಕೇವಲ ಜಾಹಿರಾತಿಗೆ ಇಷ್ಟೊಂದು ಹೆದರಿರುವ ಕಾಂಗ್ರೆಸ್ ಸರ್ಕಾರದ ನಡೆ ಪಲಾಯನವಾದ ಹಾಗೂ ʼಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆʼ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗೂ ಬಿಜೆಪಿ ಅಂಜುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಸಿದ್ದಾರೆ.
“ಪೊಲೀಸ್ ಹಾಗೂ ಕಾನೂನಿನ ಹೆಸರಿನಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯಲ್ಲದೇ ಬೇರೆನೂ ಅಲ್ಲ. ನಿಮ್ಮ ಸರ್ವಾಧಿಕಾರಿ ಮನಃಸ್ಥಿತಿಗೆ ಭಟ್ಟಂಗಿಗಳ ಹಾಗೂ ಅವಿವೇಕಿಗಳ ಸಲಹೆಯನ್ನು ಆಧರಿಸಿ, ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಕೇವಲ ಭಾರತೀಯ ಜನತಾ ಪಾರ್ಟಿ ವಿರುದ್ಧವಷ್ಟೇ ಅಲ್ಲ, ಮಾಧ್ಯಮಗಳ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭವಾಗಿದೆ, ಅದನ್ನು ಹಿಮ್ಮೆಟ್ಟಿಸುವ ಶಕ್ತಿ ಪ್ರಜಾಪ್ರಭುತ್ವಕ್ಕಿದೆ, ಕರ್ನಾಟಕದ ಜನರಿಗಿದೆ, ವಿರೋಧ ಪಕ್ಷಗಳಿಗಿದೆ ಹಾಗೂ ಮಾಧ್ಯಮಗಳಿಗಿದೆ ಎಂಬುದನ್ನು ಶೀಘ್ರದಲ್ಲಿ ಕಾಂಗ್ರೆಸ್ ಸರಕಾರ ಎದುರು ನೋಡಲಿದೆ” ಎಂದಿದ್ದಾರೆ.
