- ‘ಜೆಡಿಎಸ್‌ನ ಪೋಸ್ಟರ್‌ಗಳಲ್ಲಿ ಮತ ತರುವ ಒಂದೇ ಒಂದು ಮುಖಗಳಿಲ್ಲ’
- ‘ಸೋಲಿನ ಹತಾಶೆಯಿಂದ ಪುಂಖಾನುಪುಂಖವಾಗಿ ಅಪಪ್ರಚಾರ ಮಾಡುತ್ತಿದ್ದಾರೆ’
ಕುಮಾರಸ್ವಾಮಿ ಅವರು ಹೇಳುವಂತೆ ಗಿಫ್ಟ್ ಕಾರ್ಡ್‌ಗಾಗಿ ಮತ ಹಾಕುವ ಮುಟ್ಟಾಳರು ಯಾರೂ ಇಲ್ಲ. ಅಧಿಕಾರದಲ್ಲಿದ್ದಾಗ ತೋರಿದ ದರ್ಪ ಮತ್ತು ಕುಟುಂಬ ರಾಜಕಾರಣವೇ ಅವರ ಇಂದಿನ ಪರಿಸ್ಥಿತಿಗೆ ಕಾರಣ ಎಂದು ರಾಮನಗರ ನಗರಸಭೆ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಕೆ. ಶೇಷಾದ್ರಿ ಶಶಿ ಟೀಕಿಸಿದರು.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೂ, ಸೋಲಿಸಿದರೂ ಜನರನ್ನು ಅಯೋಗ್ಯರು ಎನ್ನುವುದು ಅವರ ಜಾಯಮಾನ. ಗೆದ್ದಾಗ ಜನ ಅವರ ಪಾಲಿಗೆ ದೇವರಾಗಿದ್ದರು. ಸೋತಾಗ ಗಿಫ್ಟ್ ಕಾರ್ಡ್ ಪಡೆದು ಮತ ಹಾಕಿದರು” ಎಂದು ವಾಗ್ದಾಳಿ ನಡೆಸಿದರು.
“ಜೆಡಿಎಸ್‌ನ ಪೋಸ್ಟರ್‌ಗಳಲ್ಲಿ ಮತ ತರುವ ಒಂದೇ ಒಂದು ಮುಖಗಳಿಲ್ಲ. ಕುಟುಂಬದ ಎಚ್.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ಜಲ್, ನಿಖಿಲ್ ಹಾಗೂ ಹೆಸರಿಲ್ಲದ ಒಂದೆರಡು ಮುಖಗಳನ್ನು ಬಿಟ್ಟರೆ ಬೇರಾರು ಇಲ್ಲ. ಅಧಿಕಾರದ ದರ್ಪ ಮತ್ತು ಕುಟುಂಬ ರಾಜಕಾರಣವೇ ಜೆಡಿಎಸ್ ಹೀನಾಯ ಸ್ಥಿತಿಗೆ ಕಾರಣ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕದ ಮಾದರಿಯಿಂದ ಜನರ ಬದುಕು ಸಂಪನ್ನವಾಗಲಿ
“ಸೋಲಿನಿಂದ ಹತಾಶರಾಗಿರುವ ಅವರು, ಗೆದ್ದವರ ವಿರುದ್ಧ ಪುಂಖಾನುಪುಂಖವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಯುತ್ತಿದ್ದ ವರ್ಗಾವಣೆ ದಂಧೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ವರ್ಗಾವಣೆ ಸಹಜ ಪ್ರಕ್ರಿಯೆ ಎಂಬ ಸಾಮಾನ್ಯ ಜ್ಞಾನವೂ ಇವರಿಗಿಲ್ಲ. ಆದರೂ, ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.