ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂವರು ಶಾಸಕರು ಸ್ಪರ್ಧಿಸಿ, ಗೆದ್ದು ಸಂಸದರಾದ ಬಳಿಕ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಶೀಘ್ರದಲ್ಲೇ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಮೂರು ಪಕ್ಷಗಳು ತಯಾರಿಯಲ್ಲಿ ತೊಡಗಿವೆ. ಬೈ-ಎಲೆಕ್ಷನ್‌ನಲ್ಲೂ ಕುಟುಂಬ ರಾಜಕಾರಣವೇ ಮತ್ತೆ ಪುನರಾವರ್ತನೆಯಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಎಚ್.ಡಿ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್‌ನಿಂದ ಇ ತುಕಾರಾಮ್ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಈ ಮೂವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸತ್ ಪ್ರವೇಶಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರೂ ಆಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ, ಮುಂದೆ ನಡೆಯಲಿರುವ ಬೈ-ಎಲೆಕ್ಷನ್‌ನಲ್ಲಿಯೂ ಮೈತ್ರಿಯಲ್ಲಿಯೇ ಕಣಕ್ಕಿಳಿಯಲಿವೆ. ಕಾಂಗ್ರೆಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ. ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆಯ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರ ಆರಂಭಿಸಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ತಯಾರಿಯ ಭಾಗವಾಗಿಯೂ ಸಂಡೂರಿಗೆ ಭೇಟಿ ನೀಡಿದ್ದು, ಬಿಜೆಪಿ-ಜೆಡಿಎಸ್ ವಿರುದ್ಧ ಅಬ್ಬರಿಸಿದ್ದಾರೆ.
ಮೂರೂ ಕ್ಷೇತ್ರಗಳಲ್ಲಿಯೂ ಮೂರೂ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಡುವ ಸಾಧ್ಯತೆ ಇದೆ. ಇಲ್ಲಿ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಂಸದ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಕಣಕ್ಕಿಯಲಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇನ್ನು, ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಸಂಡೂರಿನಲ್ಲಿ ಬಳ್ಳಾರಿ ಸಂಸದ ಇ ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿದೆ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಪ್ರಸ್ತಾಪಿಸಿದ್ದಾರೆ ಎಂದೂ ತಿಳಿದುಬಂದಿದೆ.
ಈ ವರದಿ ಓದಿದ್ದೀರಾ?: ಚನ್ನಪಟ್ಟಣ ಉಪಚುನಾವಣೆ | ಬಿಜೆಪಿ ನೆಲೆ, ಜೆಡಿಎಸ್ ಭದ್ರಕೋಟೆ ಭೇದಿಸುವರೇ ಡಿಕೆಶಿ
ಚನ್ನಪಟ್ಟಣ ಬಿಜೆಪಿಗೆ ನೆಲೆಯಾಗಿದ್ದು, ಜೆಡಿಎಸ್‌ನ ಭದ್ರಕೋಟೆಯಾಗಿದೆ. ಈ ಕೋಟೆಯನ್ನು ಭೇದಿಸಿ ಇಡೀ ರಾಮನಗರ ಜಿಲ್ಲೆಯಲ್ಲಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು, ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಡಿ.ಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಇನ್ನು, ಜೆಡಿಎಸ್ ಕೂಡ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳಬೇಕು. ಜೊತೆಗೆ, ಸತತ ಸೋಲಿನಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಬೇಕೆಂದು ಕುಮಾರಸ್ವಾಮಿ ಹವಣಿಸುತ್ತಿದ್ದಾರೆ. ಸಂಡೂರು ಕೂಡ ಕಾಂಗ್ರೆಸ್ ಕೋಟೆಯಾಗಿದ್ದು, ಅದನ್ನು ಬೇರಾರಿಗೂ ಬಿಟ್ಟುಕೊಡಬಾರದೆಂದು ತಂತ್ರ ಹೆಣೆಯುತ್ತಿದೆ. ಶಿಗ್ಗಾಂವಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ನೆಲೆ ಕೊಟ್ಟಿದ್ದು, ಆ ಕ್ಷೇತ್ರವನ್ನು ಕಳೆದುಕೊಳ್ಳಬಾರದೆಂದು ಬಿಜೆಪಿ ಯತ್ನಿಸುತ್ತಿದೆ.
ಈ ಮೂರು ಕ್ಷೇತ್ರಗಳನ್ನು ಗೆಲ್ಲಲು, ಉಳಿಸಿಕೊಳ್ಳಲು ಹಿಂದೆ ಶಾಸಕರಾಗಿದ್ದವರ ಕುಟುಂಬದ ಸದಸ್ಯರಿಗೆ ಕಣಕ್ಕಿಳಿಸುವುದು ಉತ್ತಮವೆಂದು ಭಾವಿಸಿವೆ. ಕಾಂಗ್ರೆಸ್, ಬಿಜೆಪಿಗೆ ಕ್ಷೇತ್ರ ಗೆಲ್ಲುವ ಮತ್ತು ಉಳಿಸಿಕೊಳ್ಳುವ ಹಂಬಲವಿದ್ದರೆ, ಕುಮಾರಸ್ವಾಮಿಗೆ ತಮ್ಮ ಪುತ್ರನನ್ನು ಹೇಗಾದರೂ ವಿಧಾನಸಭೆಗೆ ಕಳಿಸಬೇಕೆಂಬ ಧಾವಂತವಿದೆ.
ಇದೆಲ್ಲದರ ನಡುವೆ, ಚನ್ನಪಟ್ಟಣದಲ್ಲಿ ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಸಿ.ಪಿ ಯೋಗೇಶ್ವರ್ ಕೂಡ ಬಿಜೆಪಿ ಅಭ್ಯರ್ಥಿಯಾಗದ ಕಸರತ್ತು ನಡೆಸಿದ್ದಾರೆ. ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿಬಂದಿದ್ದಾರೆ. ಆದರೆ, ಚನ್ನಪಟ್ಟಣ ಜೆಡಿಎಸ್ ಪಾಲಿಗೆ ಹೋಗುವುದನ್ನು ಹೈಕಮಾಂಡ್ ಖಚಿತಪಡಿಸಿದೆ ಎನ್ನಲಾಗಿದೆ. ಹೀಗಾಗಿ, ದೆಹಲಿಯಿಂದ ಮರಳಿದ ಯೋಗೇಶ್ವರ್ ಮೌನಕ್ಕೆ ಜಾರಿದ್ದಾರೆ.