ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಅಧಿಕವಾಗುತ್ತಿದ್ದು, ಈ ಬಗ್ಗೆ ಶನಿವಾರ ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಕೃಷಿಕರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಹೊಸ ನೀತಿಯನ್ನು ರೂಪಿಸಬೇಕು ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
2024ರಲ್ಲಿ ಮಹಾರಾಷ್ಟ್ರದಲ್ಲಿ 2,635 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆ ಶರದ್ ಪವಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ವಿಪಕ್ಷಗಳು ಒಟ್ಟಾಗಿ ಕಣಕ್ಕೆ: ಶರದ್ ಪವಾರ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಮರಾಠವಾಡ ಮತ್ತು ವಿದರ್ಭದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಬಂದಿರುವ ಮಾಹಿತಿಯು ಆತಂಕಕಾರಿಯಾಗಿದೆ. ನಾವು ವಿವಿಧ ಸ್ಥಳಗಳಿಂದ ನಿಖರವಾದ ಡೇಟಾವನ್ನು ಸಂಗ್ರಹಿಸುತ್ತೇವೆ. ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ನೀತಿಯನ್ನು ಸಿದ್ಧಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಎನ್‌ಸಿಪಿ (ಎಸ್‌ಪಿ) ನಾಯಕ ಜಯಂತ್ ಪಾಟೀಲ್ ಅವರು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರುತ್ತಾರೆ ಎಂಬ ಸುದ್ದಿಯ ಬಗ್ಗೆಯೂ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಈ ವದಂತಿ ಬಗ್ಗೆ ಈಗಾಗಲೇ ಜಯಂತ್ ಪಾಟೀಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ” ಎಂದು ಹೇಳಿದ್ದಾರೆ. ಎನ್‌ಸಿಪಿ (ಎಸ್‌ಪಿ) ರಾಜ್ಯ ಅಧ್ಯಕ್ಷ ಪಾಟೀಲ್ ವದಂತಿ ಬಗ್ಗೆ ಸ್ಪಷ್ಟಣೆ ನೀಡಿದ್ದರು. “ನಾನು ಅಸಮಾಧಾನಗೊಂಡಿಲ್ಲ, ನನ್ನ ಹೇಳಿಕೆಯಿಂದ ಸಣ್ಣ ಭಾಗವನ್ನು ತಿರುಚಿ ಸುದ್ದಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
