ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೇಳುತ್ತಿದ್ದಾರೆ, ಯುವಜನರು ಉದ್ಯೋಗ ಹುಡುಕುತ್ತಿದ್ದಾರೆ ಮತ್ತು ಮಹಿಳೆಯರು ಹಣದುಬ್ಬರದಿಂದ ಪರಿಹಾರ ಬಯಸುತ್ತಿದ್ದಾರೆ. ಆದರೆ, ಅವರ ಮಾತುಗಳನ್ನು ಕೇಳಿಸಿಕೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಅವರು ಮಾತನಾಡಿದರು. “ಮುಂಬರುವ ಲೋಕಸಭೆ ಚುನಾವಣೆಯು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ. ಇದು ಹಿಂದುಳಿದವರು, ದಲಿತರು, ಬುಡಕಟ್ಟುಗಳು ಮತ್ತು ಸಾಮಾನ್ಯ ವರ್ಗದ ಬಡವರ ಚುನಾವಣೆಯಾಗಿದೆ” ಎಂದು ಹೇಳಿದ್ದಾರೆ.
“ಕೇಂದ್ರದ ಆಡಳಿತಾರೂಢ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ದೊಡ್ಡ ಕೈಗಾರಿಕೋದ್ಯಮಿಗಳಿಂದ ಹಣ ಪಡೆದುಕೊಂಡಿದೆ. ಮುಂಬರುವ ಚುನಾವಣೆಯು ದೇಶದ ಬಡ ಜನರು ಮತ್ತು 22-25 ಶತಕೋಟ್ಯಾಧಿಪತಿಗಳ ನಡುವಿನ ಯುದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ದೇಶದ ಎರಡು ದೊಡ್ಡ ಸಮಸ್ಯೆಗಳೆಂದರೆ ನಿರುದ್ಯೋಗ ಮತ್ತು ಹಣದುಬ್ಬರ. ಆದರೆ ಇವುಗಳನ್ನು ಮಾಧ್ಯಮಗಳು ಪ್ರಸ್ತಾಪಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು 15-20 ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಆ ಹಣದಲ್ಲಿ 24 ವರ್ಷಗಳ ಕಾಲ ಮನರೇಗಾ ಕಾರ್ಮಿಕರಿಗೆ ವೇತನ ನೀಡಬಹುದಿತ್ತು” ಎಂದು ರಾಹುಲ್ ವಿವರಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.