ದೆಹಲಿಯಲ್ಲಿ ಮತ್ತೆ ರೈತ ಘರ್ಜನೆ: ಸರ್ಕಾರಕ್ಕೆ 7 ದಿನಗಳ ‘ಡೆಡ್‌ಲೈನ್’

Date:

Advertisements

ಐತಿಹಾಸಿಕ ರೈತ ಹೋರಾಟದ ಕೇಂದ್ರವಾಗಿ ದೆಹಲಿ ಗಡಿಯಲ್ಲಿ ಮತ್ತೆ ರೈತರ ಘೋಷ ಮೊಳಗುತ್ತಿದೆ. ಉತ್ತರ ಪ್ರದೇಶದ ರೈತರು ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಮನವಿಯ ಮೇರೆಗೆ, ದೆಹಲಿ ಸಮೀಪದ ನೋಯ್ಡಾದಲ್ಲಿ ತಮ್ಮ ಹೋರಾಟವನ್ನು ಸ್ಥಗಿತಗೊಳಿಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಸಲು ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ. ಒಂದು ವಾರದಲ್ಲಿ ಬೇಡಿಕೆಗಳನ್ನು ಸರ್ಕಾರ ಪೂರೈಸದಿದ್ದರೆ, ದೆಹಲಿಯತ್ತ ಹೋರಾಟದ ಗಟ್ಟಿ ಹೆಜ್ಜೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೈಗಾರಿಕೀಕರಣ, ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ತಮ್ಮ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಭಾರತೀಯ ಕಿಸಾನ್ ಪರಿಷತ್ (ಬಿಕೆಪಿ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೇರಿದಂತೆ ನಾನಾ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತರು ಹೋರಾಟಕ್ಕಿಳಿದಿದ್ದಾರೆ.

ಎಸ್‌ಕೆಎಂ ಹೇಳುವಂತೆ, ಉತ್ತರ ಪ್ರದೇಶದ 2013ರ ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನ ಮಾಡಿಕೊಂಡ ಭೂಮಿಗೆ ಕಡ್ಡಾಯವಾಗಿ ಪರಿಹಾರ ನೀಡಬೇಕು. ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಸರ್ಕಾರ, ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಬಾಕಿ ಪಾವತಿಸುವಂತೆ ಒತ್ತಾಯಿಸಿ, ಪ್ರತಿಭಟನೆ, ಹಕ್ಕೊತ್ತಾಯ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಪರಿಣಾಮ ದೆಹಲಿ ಚಲೋ ಹೋರಾಟ ಅನಿವಾರ್ಯವಾಗಿದೆ.

Advertisements

ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸೋಮವಾರ, ಅಲೀಗಢ್ ಮತ್ತು ಆಗ್ರಾ ಸೇರಿದಂತೆ ಉತ್ತರ ಪ್ರದೇಶದ 20 ಜಿಲ್ಲೆಗಳ ರೈತರು ದಾದ್ರಿ-ನೋಯ್ಡಾದ ಗಡಿಯಲ್ಲಿ ಜಮಾಯಿಸಿ, ದೆಹಲಿಯತ್ತ ಪಾದಯಾತ್ರೆ ಹೊರಟಿದ್ದರು. ನೋಯ್ಡಾ-ದೆಹಲಿ ನಡುವಿನ ಚಿಲ್ಲಾ ಗಡಿಯಲ್ಲಿ ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಿ, ಭಾರೀ ಭದ್ರತೆಯೊಂದಿಗೆ ರೈತರನ್ನು ಪೊಲೀಸರು ತಡೆದರು. ಪರಿಣಾಮ, ರೈತರು ಯಮುನಾ ಎಕ್ಸ್‌ಪ್ರೆಸ್‌-ವೇನಲ್ಲಿಯೇ ಧರಣಿ ಕುಳಿತರು.

ಧರಣಿ ಕುಳಿತ ರೈತರ ಮನವೊಲಿಸಲು ಹಿರಿಯ ಪೊಲೀಸ್ ಅಧಿಕಾರಗಳ ದಂಡು ಚಿಲ್ಲಾ ಗಡಿಗೆ ಧಾವಿಸಿತು. ಅಧಿಕಾರಿಗಳ ಮನವಿಗೆ ಓಗೊಟ್ಟ ರೈತರು ಸರ್ಕಾರಕ್ಕೆ 7 ದಿನಗಳ ಕಾಲಾವಕಾಶ ನೀಡಿದ್ದಾರೆ. ಆ ಒಂದು ವಾರದೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ. ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು 2017ರಿಂದ ಭೂಸ್ವಾಧೀನ ಪರಿಹಾರ ದರವನ್ನು ಪರಿಷ್ಕರಿಸಿಲ್ಲ. ಭೂಮಾಲೀಕರಿಗೆ 2013ರ ಭೂಸ್ವಾಧೀನ ಕಾಯ್ದೆಯಿಂದ ಖಾತರಿಪಡಿಸಿದ ಸಮರ್ಪಕ, ಕಾನೂನುಬದ್ಧ ಪರಿಹಾರ ಮತ್ತು ಇತರ ಪ್ರಯೋಜನಗಳನ್ನು ನೀಡಲಾಗಿಲ್ಲ. ಬದಲಾಗಿ ರೈತರನ್ನು ಶೋಷಿಸಲಾಗುತ್ತಿದೆ ಎಂದು ರೈತ ಸಂಘಟನೆಗಳು ಆಕ್ರೋಶಗೊಂಡಿವೆ.

ಭೂಸ್ವಾಧೀನದಿಂದ ಭೂಮಿ ಕಳೆದುಕೊಂಡ, ನಿರಾಶ್ರಿತರಾದ ರೈತರಿಗೆ ಪರ್ಯಾಯ ಸೌಲಭ್ಯಗಳು, ಭೂರಹಿತ ರೈತರ ಮಕ್ಕಳಿಗೆ ಉದ್ಯೋಗ ಮತ್ತು ಪುನರ್ವಸತಿ ಹಾಗೂ 10%ರಷ್ಟು ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ಈವರೆಗೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ನಿರಾಶ್ರಿತರಾದ ರೈತರನ್ನು ಸರ್ಕಾರ ಭೇಟಿ ಮಾಡಿಲ್ಲ ಎಂದು ಆರೋಪಿಸುತ್ತಿವೆ.

“ನಾವು ಎಚ್ಚೆತ್ತುಕೊಂಡಿದ್ದೇವೆ. ಸರ್ಕಾರದ ಬೇಜವಾಬ್ದಾರಿ, ರೈತ ವಿರೋಧಿ ಧೋರಣೆಯನ್ನು ರಾಜ್ಯದ ರೈತರು ಅರ್ಥ ಮಾಡಿಕೊಂಡಿದ್ದಾರೆ. ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಳ್ಳಲಿದ್ದರೆ, ಬೃಹತ್ ರೈತ ಹೋರಾಟಗಳು ಭುಗಿಲೇಳಲಿವೆ” ಎಂದು ಎಸ್‌ಕೆಎಂ ಮುಖಂಡ ರಾಜ್‌ವೀರ್ ಲಾವಾನಿಯಾ ಹೇಳಿದ್ದಾರೆ.

“ನಮ್ಮ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ಆದರೆ, ಭೂಮಿಗೆ ಸರಿಯಾಗಿ ಬೆಲೆ ನಿಗದಿ ಮಾಡಿಲ್ಲ. ಪರಿಹಾರ ನೀಡಿಲ್ಲ. ಭೂಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ. ಅದನ್ನು ಸರಿಪಡಿಸಿ, ಸೂಕ್ತ ಪರಿಹಾರ ನೀಡಬೇಕು” ಎಂದು ರೈತ ಹೋರಾಟಗಾರ ನರೇಶ್‌ ಚೌಧರಿ ಆಗ್ರಹಿಸಿದ್ದಾರೆ.

ಅಲ್ಲದೆ, ಯೋಗಿ ಸರ್ಕಾರವು ವಿದ್ಯುತ್ ಖಾಸಗೀಕರಣ ಮಾಡಿ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಮುಂದಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು. ವಿದ್ಯುತ್‌ ಖಾಸಗೀಕರಣ ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕುವ ಹುನ್ನಾರದಿಂದ ಹಿಂದೆ ಸರಿಯಬೇಕು ಎಂದೂ ರೈತರು ಒತ್ತಾಯಿಸಿದ್ದಾರೆ.

ಈ ವರದಿ ಓದಿದ್ದೀರಾ?: ಮಹಾರಾಷ್ಟ್ರ | ಬಿಜೆಪಿ ಗೆಲುವಿನಲ್ಲಿ ಆರ್‌ಎಸ್‌ಎಸ್‌ ಪಾತ್ರ; ಕಾಂಗ್ರೆಸ್‌ ಕಲಿಯಬೇಕಾದ ಪಾಠ

ರೈತರು ಹೋರಾಟವನ್ನು ಸ್ಥಗಿತಗೊಳಿಸಿದ್ದರೂ, ದೆಹಲಿ ಪ್ರದೇಶದಲ್ಲಿ ಬಿಎನ್‌ಎಸ್‌ ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಇಲ್ಲದೆ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ದೆಹಲಿ-ನೋಯ್ಡಾ ಗಡಿಯಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಬ್ಯಾರಿಕೇಡ್‌ಗಳು, ಹೈಡ್ರಾ ಕ್ರೇನ್‌ಗಳು ಹಾಗೂ ಸಿಮೆಂಟ್‌ ಗೋಡೆಗಳನ್ನು ಹಾಕಿದ್ದಾರೆ. ಮುಂದಿನ ದಿನಗಳಲ್ಲಿಯೂ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು, ರೈತರನ್ನು ದಮನಿಸಲು ಸರ್ಕಾರ ಮತ್ತು ಪೊಲೀಸರು ಸಜ್ಜಾಗಿದ್ದಾರೆ.

ಇದೇ ಹೊತ್ತಿನಲ್ಲಿ, ಎಂಎಸ್‌ಪಿ ಸೇರಿದಂತೆ ನಾನಾ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಪಂಜಾಬ್, ಹರಿಯಾಣ ರೈತರು ಎಸ್‌ಕೆಎಂ (ರಾಜಕೀಯೇತರ) ನೇತೃತ್ವದಲ್ಲಿ ದೆಹಲಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ. ಡಿಸೆಂಬರ್ 6ರಿಂದ ದೆಹಲಿ ಕಡೆಗೆ ರೈತರು ಹೆಜ್ಜೆ ಹಾಕಲಿದ್ದಾರೆ.

ಒಂದೆಡೆ, ಉತ್ತರ ಪ್ರದೇಶದ ರೈತರು. ಮತ್ತೊಂದೆಡೆ, ಪಂಜಾಬ್-ಹರಿಯಾಣ ರೈತರು ದೆಹಲಿಯತ್ತ ಹೊರಟಿದ್ದಾರೆ. ಸರ್ಕಾರಗಳು ಹಿಂದೆ ನೀಡಿದ್ದ ಭರವಸೆಗಳನ್ನು ಅದೇ ಸರ್ಕಾರಗಳಿಗೆ ಮತ್ತೆ ನೆನಪಿಸಲು ಗಟ್ಟಿ ದನಿ ಮೊಳಗಿಸುತ್ತಿದ್ದಾರೆ. ದೆಹಲಿಯ ಗಡಿಗಳಲ್ಲಿ ಮತ್ತೆ 2020-2021ರ ರೈತರ ಹೋರಾಟ ಮರುಕಳಿಸುವ ಸಾಧ್ಯತೆಯಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X