“ಇಂದು ರೈತರು ಪ್ರತಿಭಟನೆಯನ್ನೇ ಮರೆತುಬಿಟ್ಟಿದ್ದಾರೆ. ಪ್ರೊ. ನಂಜುಂಡಸ್ವಾಮಿ ಅವರಿಗೆ ನಾವು ಕೊಡುವ ಬಹುದೊಡ್ಡ ಶ್ರದ್ಧಾಂಜಲಿ ಏನೆಂದರೆ ಕೇಂದ್ರದ ಯಾವುದೇ ಸಚಿವರು ರಾಜ್ಯಕ್ಕೆ ಬಂದಾಗ ಕಪ್ಪು ಪಟ್ಟಿ ಪ್ರದರ್ಶಿಸುವ ನಿರ್ಧಾರ ಮಾಡಬೇಕಾಗಿದೆ” ಎಂದು ಪ್ರೊ ರವಿವರ್ಮ ಕುಮಾರ್ ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿದ್ದ ʼನಮ್ಮ ಎಂಡಿಎಂ, ನಿದ್ರೆಗೆ ಜಾರದ ಸಮಾಜವಾದಿ ಪ್ರಜ್ಞೆʼ ಪ್ರೊ ನಂಜುಂಡಸ್ವಾಮಿ ಅವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.
“ರಾಜ್ಯದಲ್ಲಿ 243 ತಾಲ್ಲೂಕುಗಳಲ್ಲಿ 220 ಬರಪೀಡಿತ ತಾಲ್ಲೂಕು, ಅದರಲ್ಲಿ 190 ತಾಲ್ಲೂಕು ಭೀಕರ ಬರಪೀಡಿತವಾಗಿವೆ. ಹಿಂದೆ 2009ರಲ್ಲಿ ಇದೇ ಸನ್ನಿವೇಶ ಎದುರಿಸುತ್ತಿದ್ದಾಗ ಅಂದಿನ ಕೇಂದ್ರ, ಸರ್ಕಾರ ರಾಜ್ಯ ಸರ್ಕಾರಗಳು ಬೇರೆ ಬೇರೆ ಪಕ್ಷದವಾಗಿದ್ದವು. ಯಡಿಯೂರಪ್ಪ ಸಿಎಂ, ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದರು. ಪ್ರಧಾನಿ ಸಿಂಗ್ ಬರ ಅಧ್ಯಯನಕ್ಕೆ ಬಂದಾಗ ಇಲ್ಲಿನ ಕ್ಷಾಮದ ಪರಿಚಯ ಮಾಡಿಕೊಂಡ ಕೂಡಲೇ ರೂ.1000 ಕೋಟಿ ಪರಿಹಾರ ಘೋಷಣೆ ಮಾಡಿದ್ರು. ಈಗ ಆರು ತಿಂಗಳ ಹಿಂದೆ ಕರ್ನಾಟಕ ಸರ್ಕಾರ 18,000 ಕೋಟಿ ಮಧ್ಯಂತರ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಧಾನಿ ಮೋದಿ ಮತ್ತು ಬರ ಪರಿಹಾರ ಸಮಿತಿಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಡಿಸೆಂಬರ್‌ನಲ್ಲಿ ಮೂರು ದಿನದಲ್ಲಿ ಪರಿಹಾರ ಕೊಡುವುದಾಗಿ ಹೇಳಿ ಆ ನಂತರ ಬರದ ಬಗ್ಗೆ ಒಂದು ಮಾತೂ ಆಡಿಲ್ಲ. ಆನಂತರ ಪ್ರಧಾನಿಗಳೂ ರಾಜ್ಯಕ್ಕೆ ಬಂದು ಹೋಗಿದ್ಧಾರೆ. ಕಳೆದ ಭಾನುವಾರ ಅಮಿತ್ ಶಾ ರಾಜ್ಯಕ್ಕೆ ಬಂದಿದ್ರು. ಇಬ್ಬರೂ ಬರಿಗೈನಲ್ಲಿ ಬಂದ್ರು. ಆದರೆ ಯಾವ ರೈತರೂ ಪ್ರತಿಭಟಿಸುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಪ್ರೊ ನಂಜುಂಡಸ್ವಾಮಿ ಅವರು 20ನೇ ಶತಮಾನದಲ್ಲಿ ಜನಿಸಿ 21ನೇ ಶತಮಾನದಲ್ಲಿ ಅಗಲಿದ್ದಾರೆ. ಅವರ ಬಹುದೊಡ್ಡ ಕನಸು ಈ ನಾಡಿನ ರೈತರನ್ನು 21ನೇ ಶತಮಾನಕ್ಕೆ ತರುವುದಲ್ಲ, 25ನೇ ಶತಮಾನಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದಾಗಿತ್ತು. ಆ ದಿಸೆಯಲ್ಲಿ ಅವರು ಎರಡು ರೈತ ಸಂಘ ಸ್ಥಾಪಿಸಿದ್ರು. ಒಂದು ಕರ್ನಾಟಕ ರಾಜ್ಯ ರೈತ ಸಂಘ. ರೈತರು ಒಂದೇ ಒಂದು ರಾಜ್ಯದಲ್ಲಿ ಹೋರಾಟ ಮಾಡಿದ್ರೆ ಸಾಲದು. ಜಾಗತಿಕ ಮಾರುಕಟ್ಟೆಗಳು ರೈತರ ಬದುಕು, ಬೆಳೆಯನ್ನು ಕಬಳಿಸುವುದಕ್ಕೆ ತಯಾರಾಗಿ ನಿಂತಿರುವ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಸಂಘಟನೆ ಮಾಡುವುದು ಕನಸಾಗಿತ್ತು. ಸಂಯುಕ್ತ ಕಿಸಾನ್ ಮೋರ್ಚಾ ಜೊತೆ ಸೇರಿ ರಾಷ್ಟ್ರದಾದ್ಯಂತ ಚಳವಳಿ ಹಮ್ಮಿಕೊಂಡಿದ್ದು ಅಲ್ಲದೇ ವಿಶ್ವದ ಎಲ್ಲ ರೈತಸಂಘಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ರು. ಆ ಹಿನ್ನೆಲೆಯಲ್ಲಿ 90 ರಾಷ್ಟ್ರಗಳ 200 ಚಳವಳಿಗಳ ಸಂಯುಕ್ತ ಸಂಘಟನೆ ಸ್ಥಾಪಿಸಿದ್ದರು” ಎಂದು ನೆನಪಿಸಿದರು.

“ಪ್ರೊ ಹಾಕಿದ ದಾರಿಯಲ್ಲಿ 20ನೇ ಶತಮಾನ, 21ನೇ ಶತಮಾನ ದಾಟಿ 22ನೇ ಶತಮಾನಕ್ಕೆ ಕಾಲಿಡುವ ಮುನ್ನಡೆ ಸಾಧಿಸಿದೆ. ಕರ್ನಾಟಕದಲ್ಲಿ ದಾಪುಗಾಲು ಹಾಕಿದ ರೈತರು ಅವರ ಮರಣದ 20 ವರ್ಷಗಳ ನಂತರ ಹಿಂತಿರುಗಿ ನೋಡಿದರೆ ಅಂತಹ ಮಾತು ಹೇಳಲು ಬರುವುದಿಲ್ಲ. ರೈತರು ಮೊದಲಿನ ಉತ್ಸಾಹ, ಚಳವಳಿ, ಸಂಘಟನೆ ಉಳಿಸಿಕೊಂಡಿಲ್ಲ. ಮುಖ್ಯವಾಗಿ ಒಗ್ಗಟ್ಟಿನ ಕೊರತೆ ಎದುರಿಸುತ್ತಿದ್ದಾರೆ. ನಿಮಗೆಲ್ಲ ಗೊತ್ತಿದ್ದಂತೆ ನಂಜುಂಡಸ್ವಾಮಿಗಳು ಹಸಿರು ಶಾಲು ಹಾಕುವುದಕ್ಕೆ ಮೊದಲು ರೈತರು ʼರೈತ ಚಳವಳಿʼ ಎಂದು ಬರುತ್ತಿರಲಿಲ್ಲ. ಕಬ್ಬು ಬೆಳೆಗಾರರು, ರೇಷ್ಮೆ ಬೆಳೆಗಾರರು, ಕಾಫಿ ಬೆಳೆಗಾರರು ಎಂದು ಪ್ರತ್ಯೇಕವಾಗಿದ್ದರು.
ಪೂರ್ಣಚಂದ್ರ ತೇಜಸ್ವಿ ಅವರು ಕಾಫಿ ಬೆಳೆಗಾರರ ಸಂಘಟನೆ ಮಾಡುತ್ತಿದ್ದರು, ಎನ್ ಡಿ ಸುಂದರೇಶ್ ಅವರು ಕಬ್ಬು ಬೆಳೆಗಾರರ ಸಂಘಟನೆ ಮಾಡುತ್ತಿದ್ರು, ಅನಸುಯಮ್ಮನವರು ರೇಷ್ಮೆ ಬೆಳೆಗಾರರ ಸಂಘಟನೆ ಮಾಡ್ತಿದ್ರು, ಆದರೆ, ಎಲ್ಲ ರೈತರನ್ನು ಒಟ್ಟಿಗೆ ತಂದು ಎಲ್ಲ ರೈತ ಹೋರಾಟವನ್ನು ಒಂದೇ ವೇದಿಕೆಗೆ ತಂದು, ಎಲ್ಲ ರೈತರ ವಾಣಿಯಾಗಿ ಹೊರಹೊಮ್ಮಿದ್ದು ನಂಜುಂಡಸ್ವಾಮಿ ಅವರ ಬಹಳ ದೊಡ್ಡ ಸಾಧನೆಯನ್ನು ತೋರಿಸುತ್ತದೆ ಈಗ ನಮ್ಮ ಮುಂದಿರುವ ಬಹಳ ದೊಡ್ಡ ಸವಾಲು ಎಂದುರೆ ಒಗ್ಗಟ್ಟನ್ನು ಮುಂದುವರಿಸಿಕೊಂಡು ಹೋಗುವುದು. ಆ ಕೆಲಸ ಮಾಡಲು ಈ ವೇದಿಕೆ ಸಾಕ್ಷಿಯಾಗಲಿ” ಎಂದರು.
16ರಂದು ಗ್ರಾಮೀಣ ರೈತರ ಬಂದ್ ಯಶಸ್ವಿಯಾಗಿಸೋಣ
“ಇಡೀ ಪ್ರಪಂಚದಲ್ಲಿ ರೈತರ ಹೋರಾಟಕ್ಕೆ ಮಣಿದ ಸರ್ಕಾರಗಳು ಕಡಿಮೆ. ಯೂರೋಪ್‌ಲ್ಲಿ ಬಹಳ ದೊಡ್ಡ ರೈತ ಹೋರಾಟ ನಡೆಯುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ 16ರಂದು ಗ್ರಾಮೀಣ ರೈತರ ಬಂದ್ ಗೆ ಕರೆ ಕೊಟ್ಟಿದೆ. ಅದನ್ನು ನಾವು ಯಶಸ್ವಿಗೊಳಿಸೋಣ. ಮಧ್ಯಪ್ರದೇಶದಲ್ಲಿ ರೈತರ ಬಂಧನವನ್ನು ಕರ್ನಾಟಕ ಸರ್ಕಾರ ಖಂಡಿಸಿದೆ, ಇದು ಸ್ವಾಗತಾರ್ಹ. ಬಂಧಿಸಿದರೂ, ನಿಂದಿಸಿದರೂ ಚಿಂತೆಯಿಲ್ಲ, ಗೋಲೀಬಾರ್ ಮಾಡಿದರೂ ಪ್ರತಿಭಟನೆ ಮಾಡ್ತೇವೆ, ನಾವು ದೆಹಲಿ ತಲುಪುತ್ತೇವೆ ಎಂದು ಟಿಕಾಯತ್ ಅವರಿಗೆ ಮಾತು ಕೊಡೋಣ” ಎಂದರು.
“ಪ್ರೊ. ನಂಜುಂಡಸ್ವಾಮಿ ಅವರನ್ನುಎಷ್ಟೋ ಬಾರಿ ಜೈಲಿಗೆ ಹಾಕಿದ್ದಾರೆ. ಠಾಣೆಯಲ್ಲೇ ಹೊಡೆದು ಹಾಕುವ ಸಂಚೂ ನಡೆದಿತ್ತು. ಅವುಗಳೆಲ್ಲವನ್ನು ಮೆಟ್ಟಿನಿಂತು ಹೋರಾಟ ಮಾಡಿದ್ದಾರೆ. ನಾನು, ಅಗ್ರಹಾರ ಕೃಷ್ಣಮೂರ್ತಿ, ಲಕ್ಷ್ಮೀಪತಿ ಬಾಬು, ಸಮಾಜವಾದಿ ಜನಸಂಘದಲ್ಲಿ ಇದ್ದಾಗ ಇಂದಿರಾಗಾಂಧಿ ಅವರು ದೆಹಲಿಯಲ್ಲಿ ಬೆಂಗಳೂರಿಗೆ ವಿಮಾನ ಹತ್ತುತ್ತಾರೆ ಎಂದು ಗೊತ್ತಾದಾಗ ನಮ್ಮನ್ನು ಪ್ರಿವೆಂಟಿವ್ ಅರೆಸ್ಟ್ ಮಾಡ್ತಿದ್ರು. ಅನೇಕ ಬಾರಿ ನಾವು ಭೂಗತರಾಗಿಬಿಡುತ್ತಿದ್ದೆವು. ಇಂದಿರಾಗಾಂಧಿ ಕರ್ನಾಟಕಕ್ಕೆ ಬರ್ತಾರೆ ಅಂದ್ರೆ ಬಂಧಿಸುವ ಖಾತ್ರಿ ಆಗುತ್ತಿತ್ತು” ಎಂದರು.
ಟಿಕಾಯತ್ ಅವರದ್ದು ಜಗತ್ತಿಗೆ ಮಾರ್ಗದರ್ಶಿ ಆಂದೋಲನ
“ರಾಕೇಶ್ ಟಿಕಾಯತ್ ಅವರ ಪ್ರತಿಭಟನೆ ನೆನಪಿಸಿಕೊಳ್ಳಿ. ಒಂದು ವರ್ಷಕ್ಕೂ ಮೀರಿ ನಡೆದ ಚಳವಳಿ. ಅವರ ಮೇಲೆ ನಡೆದ ಕ್ರೌರ್ಯ ಎಂಥದ್ದು, ಪ್ರಲೋಭನೆ ಎಂಥದ್ದು! ಏನೇ ಮಾಡಿದರೂ ವಿಚಲಿತರಾಗದೇ ದೃಢ ಮನಸ್ಸಿನಿಂದ ಗಾಂಧೀಜಿಯ ಫೋಟೋ ಇಟ್ಟು ಅಹಿಂಸಾತ್ಮಕ ಚಳವಳಿ ಮಾಡಿ ಇಡೀ ಜಗತ್ತಿಗೆ ಮಾರ್ಗದರ್ಶಿ ಆಂದೋಲನ ಮಾಡಿ ತೋರಿಸಿದ್ದಾರೆ.
ಮುಖ್ಯವಾಗಿ ಸರ್ಕಾರ ಮೂರು ಕಾನೂನು ವಾಪಸ್ ತೆಗೆದುಕೊಳ್ಳುವವರೆಗೆ ಯಾವ ಕಾರಣಕ್ಕೂ ಚಳವಳಿಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂಬ ದೃಢ ಸಂಕಲ್ಪದಿಂದ ಜಯಶಾಲಿಯಾಗಿದ್ದಾರೆ. ಅದು ಈ ನಾಡಿನ ಎಲ್ಲರಿಗೂ ಸಂದ ಜಯ. ಅಷ್ಟೇ ಮುಖ್ಯವಾಗಿ ಘೋಷಣೆ ಮಾಡಿದ ʼಸಮಾಲೋಚನೆ ಮಾಡಿ ಪರಿಹಾರ ಕೊಡುತ್ತೇವೆʼ ಎಂಬ ಗ್ಯಾರಂಟಿ ಎಲ್ಲಿ? ಎಂಎಸ್‌ಪಿ ಶಾಸನ ಮಾಡುವುದಾಗಿ ಹೇಳಿದ್ರು. ಅದಕ್ಕಾಗಿ ಎರಡು ವರ್ಷಗಳ ನಂತರ ತಾಳ್ಮೆಯಿಂದ ಕಾದು ಈಗ ಮತ್ತೆ ಹೋರಾಟದ ಕರೆ ಕೊಟ್ಟಿದ್ದಾರೆ. ಫೆ. 16ರಂದು ಗ್ರಾಮೀಣ ಭಾರತ ಬಂದ್ ಮಾಡಿ ಎಂಎಸ್‌ಪಿ ಕಾನೂನು ಜಾರಿಗೆ ಒತ್ತಾಯಿಸಬೇಕಾಗಿದೆ.
ಪತ್ರಿಕೆಯಲ್ಲಿ ಮೋದಿ ಗ್ಯಾರಂಟಿಯದ್ದೇ ಸುದ್ದಿ. ಆದರೆ, ಅದರಲ್ಲಿ ರೈತರ ಗ್ಯಾರಂಟಿಯೇ ಇಲ್ಲ. 2022ರ ಒಳಗೆ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದಾಗ ಗ್ರಾಮೀಣ ಭಾರತದ ನಿರುದ್ಯೋಗ ಪ್ರಮಾಣ 4.6% ಇತ್ತು. ಈಗ ನಿರುದ್ಯೋಗ ಪ್ರಮಾಣ ದುಪ್ಪಟ್ಟಾಗಿ ಈಗ 8%ಗೆ ಬಂದಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನಿರುದ್ಯೋಗ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ರೈತರು ಕಂಕಣಬದ್ಧರಾಗಿ ನಂಜುಂಡಸ್ವಾಮಿ ಅವರ ಕರೆಗೆ ಓಗೊಟ್ಟು 21ನೆಯ ಶತಮಾನದ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಸವಾಲು ಸ್ವೀಕರಿಸುತ್ತೇವೆ ಎಂದು ಸಂಕಲ್ಪ ಮಾಡೋಣ” ಎಂದು ರವಿವರ್ಮ ಕುಮಾರ್ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರೈತ ನೇತಾರ ರಾಕೇಶ್ ಟಿಕಾಯತ್, ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಯದ್ವೀರ್ ಸಿಂಗ್, ಶಾಸಕ ಬಿಆರ್ ಪಾಟೀಲ್, ಲೇಖಕ ನಟರಾಜ್ ಹುಳಿಯಾರ್, ಸಾಹಿತಿ ಎಸ್ ಜಿ ಸಿದ್ದರಾಮಯ್ಯ, ರೈತ ನಾಯಕಿ ಅನಸೂಯಮ್ಮ, ಪಚ್ಚೆ ನಂಜುಂಡಸ್ವಾಮಿ, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.