ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟವು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡು ಬಗ್ಗುವಂತೆ ಮಾಡಿದೆ. ಇಂದು (ಶುಕ್ರವಾರ) ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲೇ ಕೇಂದ್ರ ಸರ್ಕಾರವು ಎಲ್ಲ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಿ ಖರೀದಿಸುವುದಾಗಿ ಘೋಷಿಸಿದೆ.
ರಾಜ್ಯಸಭೆಯ ಕಲಾಪದಲ್ಲಿ ಪ್ರಶ್ನೋತ್ತರದ ವೇಳೆ ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ನೀಡುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ”ರೈತರ ಎಲ್ಲ ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗುವುದು ಎಂದು ಸದನಕ್ಕೆ ನಾನು ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿಯವರ ಭರವಸೆಯನ್ನು ಈಡೇರಿಸುವ ಗ್ಯಾರಂಟಿಯಾಗಿದೆ” ಎಂದು ಹೇಳಿದ್ದಾರೆ.
”2019ರಿಂದ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭವನ್ನು ದೊರೆಯುವಂತೆ ಎಂಎಸ್‌ಪಿ ನಿಗದಿ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಮೋದಿ ಸರ್ಕಾರವು ರೈತರಿಗೆ ಲಾಭದಾಯಕ ಬೆಲೆಗಳನ್ನು ನೀಡುತ್ತಿದೆ. ಕಳೆದ ಮೂರು ವರ್ಷಗಳಿಂದ ಭತ್ತ, ಜೋಳ, ಗೋಧಿ ಮತ್ತು ಸೋಯಾಬೀನ್ಅನ್ನು ಉತ್ಪಾದನಾ ವೆಚ್ಚಕ್ಕಿಂತ 50%ರಷ್ಟು ಹೆಚ್ಚು ಬೆಲೆಗೆ ಖರೀದಿಸಲಾಗಿದೆ” ಎಂದು ಚೌಹಾಣ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ದೆಹಲಿ ಚಲೋ | ಪೊಲೀಸರ ತಡೆಗೋಡೆ ಬೇಧಿಸಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ
ಇದೇ ವೇಳೆ, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಚೌಹಾಣ್, “ನಮ್ಮ ಸ್ನೇಹಿತರು ಅಧಿಕಾರದಲ್ಲಿದ್ದಾಗ, ಅವರು ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ವಿಶೇಷವಾಗಿ, ಉತ್ಪನ್ನದ ವೆಚ್ಚಕ್ಕಿಂತ 50% ಹೆಚ್ಚು ಬೆಲೆಯೊಂದಿಗೆ ಎಂಎಸ್‌ಪಿ ನಿಗದಿ ಪಡಿಸಲಾಗದು ಎಂದಿದ್ದರು. ಆ ಬಗ್ಗೆ ನನ್ನ ಬಳಿ ದಾಖಲೆ ಇದೆ. ಅವರು ಎಂದಿಗೂ ರೈತರನ್ನು ಗೌರವಿಸಿಲ್ಲ” ಎಂದು ಆರೋಪಿಸಿದ್ದಾರೆ.
ಎಂಎಸ್‌ಪಿ, ಕೃಷಿ ಸಾಲ ಮನ್ನಾ ಸೇರಿದಂತೆ ಕೇಂದ್ರ ಸರ್ಕಾರವೇ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋಗೆ ಕರೆಕೊಟ್ಟಿದ್ದರು. ಶುಕ್ರವಾರ ದೆಹಲಿಯತ್ತ ರೈತರು ಹೊರಟಿದ್ದರು. ಅವರನ್ನು ಅವರನ್ನು ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ರಸ್ತೆಗೆ ಬೃಹತ್ ಮುಳ್ಳು ತಂತಿ ಬೇಲಿಗಳನ್ನು ಹಾಕಿದ್ದಾರೆ. ಮುಳ್ಳು ತಂತಿಯ ತಡೆಗೋಡೆಯನ್ನು ಭೇದಿಸಿ ಮುನ್ನುಗ್ಗಲು ರೈತರು ಮುಂದಾಗಿದ್ದು, ಅವರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಶಂಭು ಗಡಿಯಲ್ಲಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.