ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆ. ತಿಂಗಳ 29ರಿಂದ ಮಾ.9ರವರೆಗೆ ರಾಷ್ಟ್ರೀಯ ಸರಸ್ ಮೇಳ ಮತ್ತು ಬೃಹತ್ ರಾಷ್ಟೀಯ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ.
ಈ ಸಂಬಂಧ ಶುಕ್ರವಾರ ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಸ್.ಟಿ.ಸೋಮಶೇಖರ್, ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ‘ನಮ್ಮ ಸರಸ್ ಮೇಳ 2024 ಮತ್ತು ಅಕ್ಕ ಕೆಫೆ ಲೋಗೋ’ ಅನಾವರಣಗೊಳಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, “ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಸರಸ್ ಮೇಳವು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತದ 250 ಸ್ವ-ಸಹಾಯ ಗುಂಪುಗಳು ಭಾಗವಹಿಸಲಿವೆ. ಗುಂಪುಗಳು ಉತ್ಪಾದಿಸಿದ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ
“ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಉದ್ಘಾಟಿಸಲಿದ್ದಾರೆ. ಸರ್ಕಾರ ಈ ಮೇಳಕ್ಕೆ ವಿಶೇಷವಾದ ಒತ್ತು ಕೊಟ್ಟಿದೆ. ಏಕೆಂದರೆ ಬದಲಾವಣೆಯಾಗುವುದಾದರೆ ಅದು ಮಹಿಳೆಯರಿಂದ ಸಾಧ್ಯ ಎಂಬುದು ನಮ್ಮ ಸರ್ಕಾರಕ್ಕೆ ಅರ್ಥವಾಗಿದೆ. ಹಾಗಾಗಿ ಇದಕ್ಕೆ ವಿಶೇಷ ಒತ್ತು ಕೊಟ್ಟಿದ್ದೇವೆ” ಎಂದು ಪಾಟೀಲ್ ತಿಳಿಸಿದರು.
ಬೃಹತ್ ಉದ್ಯೋಗ ಮೇಳ
“ಈಗಾಗಲೇ ನಿಗದಿಯಾಗಿರುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 22 ದಿನಗಳ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಒಂದೇ ಸೂರಿನಡಿ ಉದ್ಯೋಗ ಕಲ್ಪಿಸಿಕೊಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಸಿದ್ದತೆಗಳು ಮುಕ್ತಾಯ ಹಂತದಲ್ಲಿದೆ” ಎಂದು
ಪಾಟೀಲ್ ಮಾಹಿತಿ ನೀಡಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, “ಈ ರೀತಿಯ ಕರಕುಶಲ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ಇಡೀ ವರ್ಷ ನಡೆಯಲು ಅನುಕೂಲವಾಗುವಂತೆ ಶಾಶ್ವತ ಪ್ರದರ್ಶನ ಕೇಂದ್ರಕ್ಕೆ ಸ್ಥಳಾವಕಾಶ ಕಲ್ಪಿಸಲು ಹುಡುಕಾಟ ನಡೆಯುತ್ತಿದೆ. ಬ್ರಾಂಡ್ ಬೆಂಗಳೂರು ಅಭಿಯಾನದಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತಿದೆ” ಎಂದರು.
