ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ, ‘ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ’ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಕುಟುಂಬದವರ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರ ಠಾಣೆಗೆ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜೆ. ಸರವಣನ್ ಶನಿವಾರ ದೂರು ನೀಡಿದ್ದಾರೆ.
“ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬಸ್ಥರನ್ನು ಅವಮಾನಿಸಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಲು ಈ ರೀತಿ ಮಾತಾಡುತ್ತಿದ್ದಾರೆ. ಇದೊಂದು ದೇಶ ವಿರೋಧಿ ಹೇಳಿಕೆ. ಸಚಿವರ ಕುಟುಂಬದವರನ್ನು ಅವಮಾನಿಸಿರುವ ಶಾಸಕ ಯತ್ನಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ದೂರು ಸ್ವೀಕರಿಸಿರುವ ಪೊಲೀಸರು, “ಯತ್ನಾಳ ವಿಜಯಪುರದಲ್ಲಿ ಮಾತನಾಡಿದ್ದಾರೆ. ಕೃತ್ಯ ನಡೆದ ಆಧಾರದಲ್ಲಿ ವಿಜಯಪುರ ಜಿಲ್ಲಾ ಪೊಲೀಸರಿಗೆ ದೂರು ಹಸ್ತಾಂತರಿಸಲಾಗುವುದು” ಎಂದಿದ್ದಾರೆ.
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಗ್ಗೆ ಏಪ್ರಿಲ್ 6ರಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಯತ್ನಾಳ, “ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ. ದೇಶ ವಿರೋಧಿ ಹೇಳಿಕೆ ನೀಡುವುದು ಅವರ ಚಟವಾಗಿದೆ” ಎಂದು ಹೇಳಿದ್ದರು. ಈ ಮೂಲಕ ಸಚಿವರ ಇಡೀ ಕುಟುಂಬಕ್ಕೆ ಅವಹೇಳನ ಮಾಡಿದ್ದಾರೆ. ಸಚಿವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿತ್ತು. ಈ ಬಗ್ಗೆ ದಿನೇಶ ಗುಂಡೂರಾವ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಎನ್ನುವಂತೆ ಮಾತನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಬಾಂಡ್ ಅಕ್ರಮದ ರೂವಾರಿ ಮೋದಿ ಅವರನ್ನು ಬಂಧಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ
“ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಬಿಜೆಪಿಯು ಇದಕ್ಕೇನು ಹೇಳುತ್ತದೆ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸಿದ ರಾಜ್ಯ ಬಿಜೆಪಿ ನಾಯಕರು ಉತ್ತರ ನೀಡಬೇಕು” ಎಂದು ಒತ್ತಾಯಿಸಿದ್ದರು.