ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಆರ್ಥಿಕ ಇಲಾಖೆಗೆ ಮಾಹಿತಿ ನೀಡಿ, ನೇಮಕಾತಿ ಆರಂಭಿಸಲು ಮಾರ್ಗಸೂಚಿ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. “ಕೃಷಿ ವಿಶ್ವವಿದ್ಯಾಲಯಗಳು ಕೇವಲ ಸಂಶೋಧನೆಗೆ ಸೀಮಿತವಾಗದೆ ಕೃಷಿ ಹಾಗೂ ಕೃಷಿಕರ ಶ್ರೇಯೋಭಿದ್ದಿಗೆ ಅದು ಬಳಕೆಯಾಗಬೇಕು. ಕೃಷಿ ವಿವಿಗಳಿಗೆ ಸರ್ಕಾರ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹ ನೀಡುತ್ತಿದೆ. ಅದರ ಫಲ ರೈತರಿಗೆ ವರ್ಗಾವಣೆಯಾಗಬೇಕು” ಎಂದು ಸೂಚನೆ ನೀಡಿದರು.
“ಐಸಿಎಆರ್ ಮಾರ್ಗಸೂಚಿ ಮಾನದಂಡ ಪೂರೈಸುವ ಕೃಷಿ ಕಾಲೇಜು/ಸಂಸ್ಥೆಗಳಿಗೆ ಮಾತ್ರ ಆಯಾಯಾ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಅಫಿಲೇಷನ್ ನೀಡುವ ಬಗ್ಗೆ ಪರಿಶೀಲಿಸಿ, ಕ್ರಮ ವಹಿಸಬೇಕು” ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಬೆಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ಕುಲಸಚಿವರು ಇದ್ದರು.