- ಸಚಿವ ಸಂಪುಟದ ಸಚಿವರಿಗೆ ಸೂಚನೆ ನೀಡಲು ಮುಖ್ಯಮಂತ್ರಿಗೆ ಮನವಿ
- ಹಳೆಯ ಪ್ರತಿಭಟನೆಗಳಿಂದ ಆದ ಸಮಸ್ಯೆಗಳನ್ನು ಬಿಚ್ಚಿಟ್ಟ ಸಭಾಪತಿಗಳು
ಕರ್ನಾಟಕ ವಿಧಾನ ಮಂಡಲದ 151 ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.4 ರಿಂದ 15ರ ವರೆಗೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಅರ್ಥಪೂರ್ಣವಾಗಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕರೆದು ಮಾತನಾಡಿದ ಅವರು, “ಅಧಿವೇಶನ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವುದರಿಂದ ಅಧಿವೇಶನದಲ್ಲಿ ಚರ್ಚಿಸಲು ಆಗುವುದಿಲ್ಲ. ಸುವರ್ಣ ಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಸಂಘಟನೆಗಳ ಮುಖಂಡರಲ್ಲಿ ಮನವಿ ಮಾಡಲು ತಮ್ಮ ಸಚಿವ ಸಂಪುಟದ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಕೋರಿದ್ದೇನೆ” ಎಂದು ಹೇಳಿದರು.
“ಪ್ರತಿ ಬಾರಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತ ಸಂಘ, ಶಿಕ್ಷಕರ ಸಂಘ, ನೌಕರರ ಸಂಘ, ಕನ್ನಡ ಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ತಮ್ಮ ಹಲವಾರು ಸಮಸ್ಯೆ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ನಿರಂತರವಾಗಿ ಧರಣಿ, ಸತ್ಯಾಗ್ರಹ, ಪ್ರತಿಭಟನೆ, ಸಮಾವೇಶ ಮಾಡುತ್ತವೆ. ಇದರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎನ್ನುವ ಮಾತುಗಳು ಪ್ರತಿಸಲ ಕೇಳಿಬಂದಿವೆ” ಎಂದು ತಿಳಿಸಿದ್ದೇನೆ ಎಂದರು.
“ಕಳೆದ ವರ್ಷ 2022 ರ ಡಿಸೆಂಬರ್ 19 ರಿಂದ 29 ರ ವರೆಗೆ ನಡೆದ ಅಧಿವೇಶನದ ಸಂದರ್ಭದಲ್ಲಿ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ 10 ದಿನಗಳಲ್ಲಿ 102 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಅವುಗಳಲ್ಲಿ ಸುಮಾರು 64 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಸತ್ಯಾಗ್ರಹ, ಧರಣಿ ಮುಂತಾದ ಹೋರಾಟಾತ್ಮಕ ಚಟುವಟಿಕೆಗಳನ್ನು ನಡೆಸಿವೆ. ಈ ಎಲ್ಲಾ ಪ್ರತಿಭಟನೆ ಸತ್ಯಾಗ್ರಹಗಳಲ್ಲಿ ಸುಮಾರು 65,000 ದಿಂದ 80,000 ಜನರು ಪಾಲ್ಗೊಂಡಿದ್ದರು” ಎಂದು ಮಾಹಿತಿ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ನಿಗಮ, ಮಂಡಳಿ ಹುದ್ದೆಗಳು ಹರಾಜು | ಕಾಂಗ್ರೆಸ್ ವಿರುದ್ಧ ದರಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
“ಪಂಚಮಸಾಲಿ ಮೀಸಲಾತಿಗೆ ಒತ್ತಾಯಿಸಿ ನಡೆದ ಪಾದಯಾತ್ರೆ ಹಾಗೂ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಂದೇ ದಿನ ಸುಮಾರು ಒಂದೂವರೆ ಲಕ್ಷ ಜನ ಬೆಳಗಾವಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲಾ ಪ್ರತಿಭಟನೆ, ಸತ್ಯಾಗ್ರಹ, ಸಮಾವೇಶ, ಧರಣಿಗಳಿಗಾಗಿ ಸರ್ಕಾರದ ವತಿಯಿಂದ ಸುಮಾರು 5,000 ಜನರು ಸೇರಿಸಲು ಸ್ಥಳಾವಕಾಶ ಕಲ್ಪಿಸುವ 4 ಬೃಹತ್ ಪ್ರಮಾಣದ ಟೆಂಟ್‌ಗಳನ್ನು ನಿರ್ಮಿಸಲಾಗಿತ್ತು. ಸುವರ್ಣ ಸೌಧದ ಹೊರಗಡೆ ಚಳವಳಿ ನಡೆಯುತ್ತಿರುವುದರ ಹಿನ್ನಲೆಯಲ್ಲಿ ಉಭಯ ಸದನಗಳ ಮಾನ್ಯ ಶಾಸಕರು ಅವುಗಳಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯವಾಗಿದ್ದು, ಇದರಿಂದ ಮಾನ್ಯ ಶಾಸಕರುಗಳು ಅಧಿವೇಶನದಲ್ಲಿ ಸಂಪೂರ್ಣವಾಗಿ ಹಾಗೂ ಕ್ರಿಯಾಶೀಲರಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ವಿವರಿಸಿದರು.
“ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾದರೆ ಹಾಗೂ ಸದನದ ಒಳಗಡೆ ಜನಸಾಮಾನ್ಯರ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆದು ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿದ್ದು ಸಾರ್ಥಕವಾಗಿ ಸರ್ಕಾರಕ್ಕೆ ಗೌರವ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎನ್ನುವುದು ನನ್ನ ಮನದಾಳದ ಇಂಗಿತ” ಎಂದು ಹೇಳಿದರು.