ಭಾರತದ ಎಲ್ಲ ರಾಜ್ಯಗಳು ಮತ್ತು ಸಂಸತ್ತಿನ 151 ಮಂದಿ ಶಾಸಕರು ಮತ್ತು ಸಂಸದರು ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಗಳ ಮೇಲೆ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್ (ಎಡಿಆರ್) ಹೇಳಿದೆ.
ಶಾಸಕರು ಮತ್ತು ಸಂಸದರು ಚುನಾವಣೆಯ ಸಮಯದಲ್ಲಿ ಸಲ್ಲಿಸಿದ ನಾಮಪತ್ರಗಳಲ್ಲಿ ತಾವು ಎದುರಿಸುತ್ತಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಶಾಸಕರು ಮತ್ತು ಸಂಸದರಲ್ಲಿ ಬಿಜೆಪಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿ ಹೇಳಿದೆ.
2019ರಿಂದ 2024ರವರೆಗೆ ನಡೆದ ಎಲ್ಲ ಚುನಾವಣೆಗಳ ಸಮಯದಲ್ಲಿ ರಾಜಕಾರಣಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಎಡಿಆರ್ ಪರಿಶೀಲಿಸಿದೆ. ಅವುಗಳಲ್ಲಿ ಗೆದ್ದು ಶಾಸಕರು, ಸಂಸದರಾಗಿ ಆಯ್ಕೆಯಾಗಿರುವ 4,809 ಮಂದಿಯ ಅಫಿಡವಿಟ್‌ಗಳ ಪೈಕಿ, 4,693 ನಾಮಪತ್ರಗಳನ್ನು ಪರಿಶೀಲಿಸಿ, ಎಡಿಆರ್ ವರದಿ ತಯಾರಿಸಿದೆ.
543 ಸಂಸದರ ಪೈಕಿ 16 ಮಂದಿ ಮತ್ತು ದೇಶದ 4,215 ಶಾಸಕರ ಪೈಕಿ 135 ಮಂದಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅವರಲ್ಲಿ, ಹೆಚ್ಚಿನ ಪಾಲು ಪಶ್ಚಿಮ ಬಂಗಾಳದ್ದಾಗಿದ್ದು, ಬಂಗಾಳದ 25 ಮಂದಿ ಹಾಲಿ ಸಂಸದರು – ಶಾಸಕರಿದ್ದಾರೆ ಎಂದು ವರದಿ ವಿವರಿಸಿದೆ.
ಇನ್ನು, ಮಹಿಳಾ ದೌರ್ಜನ್ಯದ ಆರೋಪಿತ ಜನಪ್ರತಿನಿಧಿಗಳಲ್ಲಿ 54 ಮಂದಿ ಸಂಸದ-ಶಾಸಕರು ಬಿಜೆಪಿಯವರಾಗಿದ್ದಾರೆ. ಕಾಂಗ್ರೆಸ್‌ನ 23 ಮತ್ತು ಟಿಡಿಪಿ 17 ಮಂದಿ ಕೂಡ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಆರೋಪಿಗಳಾಗಿದ್ದಾರೆ.