- ರಾಹುಲ್ ಗಾಂಧಿಯವರ ಕುರಿತು ಸುಳ್ಳು ವಿಡಿಯೋ ಸೃಷ್ಟಿಸಿ ಹರಿಬಿಟ್ಟ ಆರೋಪ
- ಕಾಂಗ್ರೆಸ್ ನಾಯಕರ ದೂರಿನ ಮೇಲೆ ಹೈಗ್ರೌಂಡ್ಸ್ ಠಾಣೆ ಪೊಲೀಸರಿಂದ ಎಫ್‌ಐಆರ್
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ್ದ ದೂರಿನ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ರಾಹುಲ್ ಗಾಂಧಿಯವರ ಕುರಿತು ಸುಳ್ಳು ಜನಾಭಿಪ್ರಾಯ ಸೃಷ್ಟಿಸಲು ನೆಲದ ಕಾನೂನಿನ ಬಗ್ಗೆ ಗೌರವವೇ ಇಲ್ಲದಂತೆ ಟ್ವಿಟರ್‌ನಲ್ಲಿ ಸುಳ್ಳು ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ವಿರುದ್ದ 17 ಜೂನ್ 2023ರಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಎಂಎಲ್‌ಸಿ ರಮೇಶ್ ಬಾಬು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಏನಿದು ಘಟನೆ?
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದೇಶದ್ರೋಹ ಚಟುವಟಿಕೆಯಲ್ಲಿ ಕಾಂಗ್ರೆಸ್ ಭಾಗಿಯಾಗುತ್ತಿದೆ ಎಂಬ ದೃಷ್ಟಿಯಲ್ಲಿ ಅನಿಮೇಷನ್ ಬಳಸಿ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿ ಅವಹೇಳನ ಮಾಡಲಾಗಿತ್ತು. ಆ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದೂರು ದಾಖಲಿಸಿದ್ದರು.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, “ಬಿಜೆಪಿಯ ಸುಳ್ಳು ಫ್ಯಾಕ್ಟರಿಯನ್ನು ನಾವು ಬಂದ್ ಮಾಡುತ್ತೇವೆ. ಹೋದ ಸಲ ಅವರ ಸರ್ಕಾರದಲ್ಲಿ ಅವರ ಆಟ ನಡೆದಿತ್ತು. ಯಾರು ಶಾಂತಿ ಕದಡುವ ಪ್ರಯತ್ನ ಮಾಡುತ್ತಾರೆ, ಅವರ ವಿರುದ್ಧ ಕಾನೂನು ಚೌಕಟ್ಟಿನ ಅಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಸಿದ್ದರು.