ಅನುಮತಿ ಪಡೆಯದೆ ಸಾವರ್ಕರ್ ನಾಮಫಲಕ ಹಾಕಿ, ಹನುಮ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ 21 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ, ಭಟ್ಕಳದ ತೆಂಗಿನಗುಂಡಿ ಗ್ರಾಮದಲ್ಲಿ ಬಿಜೆಪಿ ಮತ್ತು ಹಿಂದುತ್ವವಾದಿ ಕೋಮು ಕಾರ್ಯಕರ್ತರು ಸರ್ಕಾರಿ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿದ್ದರು. ಅನುಮತಿ ಪಡೆಯದ ಕಾರಣ, ಪಂಚಾಯತಿ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದರು.
ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಭೆ ನಡೆಸಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ಅನಂತ ಕುಮಾರ್ ಹೆಗಡೆ, ತನ್ನ ಬೆಂಬಲಿಗರನ್ನು ಕರೆದೊಯ್ದು, ತೆರವುಗೊಳಿಸಿದ್ದ ಸ್ಥಳದಲ್ಲೇ ಮತ್ತೆ ಹನುಮ ಧ್ವಜ ಹಾರಿಸಿ, ಸಾವರ್ಕರ್ ಫೋಟೋ ಇದ್ದ ನಾಮಫಲಕ ಹಾಕಿದ್ದರು.
ತೆರವುಗೊಳಿಸಿದ್ದ ಜಾಗದಲ್ಲೇ ಮತ್ತೆ ಕೋಮುವಾದಿಗಳ ಬಾವುಟ ಹಾರಿಸಿದ ಆರೋಪದ ಮೇಲೆ ಅನಂತ ಕುಮಾರ್ ಹೆಗಡೆ ಮತ್ತು ಇತರ 20 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೋದಿ ‘ಚಂದಾ ದಂಧೆ’; ನಿಜ ಮುಖ ಮುಚ್ಚಿಡಲು ಕೊನೆಯ ಪ್ರಯತ್ನ ಎಂದ ರಾಹುಲ್ ಗಾಂಧಿ
ಕಳೆದ ನಾಲ್ಕುವರೆ ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣೆಯಾಗಿದ್ದ ಅನಂತ ಕುಮಾರ್ ಹೆಗಡೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಪ್ರತ್ಯಕ್ಷರಾಗಿದ್ದಾರೆ. ಮುಸ್ಲಿಂ ವಿರೋಧಿ ಹೇಳಿಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ನಿಂದಿಸಿ, ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗುತ್ತಿದ್ದಾರೆ.
ಈ ಬಾರಿಯೂ, ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹವಣಿಸುತ್ತಿದ್ದಾರೆ. ಆದರೆ, ಈ ಬಾರಿ, ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಟಿಕೆಟ್ ಸಿಕ್ಕರೂ, ಅವರು ಗೆಲ್ಲುವುದು ಅನುಮಾನ ಎಂಬ ಮಾತುಗಳೂ ಇವೆ.