ಭ್ರಷ್ಟಾಚಾರದ ತನಿಖೆ ಬೆನ್ನಲ್ಲೇ ಬಿಬಿಎಂಪಿ ಬೆಂಕಿ ಅವಘಡ : ಅನುಮಾನಗಳನ್ನು ಹುಟ್ಟುಹಾಕಿದ ಘಟನೆ

Date:

Advertisements
  • ಮೂರು ಆಯಾಮಗಳಲ್ಲಿ ತನಿಖೆಗೆ ಸೂಚನೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
  • ಬಿಜೆಪಿ ಮೇಲೆ ಆರೋಪ ಮಾಡಿ ಟ್ವೀಟ್ ಮಾಡಿದ್ದ ಕಾಂಗ್ರೆಸ್; ಬಳಿಕ ಡಿಲೀಟ್

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಪರ್ಸೆಂಟೇಜ್ ಆರೋಪ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸರ್ಕಾರ ತನಿಖೆಗೆ ಮುಂದಾಗಿರುವ ಬೆನ್ನಲ್ಲೇ, ಪೂರಕ ದಾಖಲೆಗಳಿದ್ದ ಕೊಠಡಿಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿಯಲ್ಲಿ ನಿನ್ನೆ ನಡೆದ ಬೆಂಕಿ ಅವಘಡ ಘಟನೆಯು, ರಾಜಕೀಯ ತಿರುವು ಪಡೆದುಕೊಂಡಿದೆ.

ಟ್ವಿಟರ್‌ನಲ್ಲಿ ಬಿಜೆಪಿ ಮೇಲೆ ಆರೋಪ ಮಾಡಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಬಳಿಕ ಡಿಲೀಟ್ ಮಾಡಿದೆ. ಇದು ಕೂಡ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Advertisements
tweet 2023

‘ಡಿಲೀಟ್’ ಮಾಡಲಾಗಿರುವ ಕಾಂಗ್ರೆಸ್ ಟ್ವೀಟ್‌ನ ಸ್ಕ್ರೀನ್ ಶಾಟ್

ಈ ಸಂಬಂಧ ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿದ್ದ ಕಾಂಗ್ರೆಸ್, ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. 40% ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ’ ಎಂದು ನಿನ್ನೆ ಸಂಜೆ 05: 44ರ ಸುಮಾರಿಗೆ ಟ್ವೀಟ್ ಮಾಡಿತ್ತು. ಆದರೆ ಆ ಟ್ವೀಟ್‌ ಅನ್ನು ಸದ್ಯ ‘ಡಿಲೀಟ್’ ಮಾಡಲಾಗಿದೆ.

ನಿನ್ನೆಯ ಘಟನೆಯಲ್ಲಿ ಬಿಬಿಎಂಪಿಯ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು, ಕಂಪ್ಯೂಟರ್‌ಗಳು ಹಾಗೂ ಪ್ರಯೋಗಾಲಯದ ಉಪಕರಣಗಳು, ಪೀಠೋಪಕರಣಗಳಿಗೆ ಹಾನಿಯಾಗಿವೆ.

ಎಷ್ಟು ಕಡತ, ಯಾವ ಕಾಮಗಾರಿಗೆ ಸಂಬಂಧಿಸಿದ ಕಡತಗಳು ಬೆಂಕಿಗಾಹುತಿಯಾಗಿವೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಅವಘಡದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ತಜ್ಞರ ತಂಡ, ಬೆಂಕಿಯಿಂದ ಸುಟ್ಟಿರುವ ಕೆಲ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ.

ಈ ಹಿಂದೆಯೂ ನಡೆದಿತ್ತು ಅಗ್ನಿ ಅವಘಡ

ಬಿಬಿಎಂಪಿ ಕಚೇರಿಗಳಲ್ಲಿ ಉಂಟಾಗುತ್ತಿರುವ ಬೆಂಕಿ ಅವಘಡಗಳ ಇತಿಹಾಸವನ್ನು ಕೆದಕಿದರೆ, ಇಂತಹ ಘಟನೆ ಈ ಹಿಂದೆಯೂ ನಡೆದಿರುವುದನ್ನು ಗಮನಿಸಬಹುದು.

ಈ ಹಿಂದೆಯೂ ಬಿಬಿಎಂಪಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆಗಲೂ ಕಡತಗಳು ಬೆಂಕಿಗೆ ಆಹುತಿಯಾಗಿದ್ದವು.

2011ರ ನ.19ರಂದು ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತ್ತು. ಸಾವಿರಾರು ಕೋಟಿ ಹಗರಣದ ಮಹತ್ವದ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿದ್ದವು. ಮಹತ್ವದ ದಾಖಲೆಗಳನ್ನು ನಾಶ ಮಾಡಲೆಂದೇ ವ್ಯವಸ್ಥಿತ ಸಂಚು ಮಾಡಿದ್ದು ಮೇಲ್ನೋಟಕ್ಕೆ ಸಾಬೀತಾಗಿದ್ದರೂ, ತನಿಖೆ ಎಲ್ಲಿಯವರೆಗೆ ನಡೆಯಿತು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.

2022ರ ಎ.15ರಂದು ಯಲಹಂಕ ವಲಯದ ಬ್ಯಾಟರಾಯನಪುರದಲ್ಲಿರುವ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಪೀಠೋಪಕರಣಗಳು ಸುಟ್ಟು ಭಸ್ಮವಾಗಿದ್ದವು. ಆದರೆ, ಕಡತಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.

₹137 ಕೋಟಿ ಮೊತ್ತದ ಕಾಮಗಾರಿ ಆಗದೆ ಬಿಲ್ ಪಾವತಿ!

ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಮುನ್ನ ಬೆಂಗಳೂರಿನ ಹಲವು ಶಾಸಕರು ಮೌಖಿಕವಾಗಿ ನೀಡಿದ್ದ ಭರವಸೆಯ ಮೇಲೆ, ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಿಕೊಂಡಿದ್ದು, ತಮ್ಮ ಸರ್ಕಾರ ಬಂದನಂತರ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಲೋಕಾಯುಕ್ತ ಸಂಸ್ಥೆ ಕೂಡ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137 ಕೋಟಿ ರೂ. ಮೊತ್ತದ ಕಾಮಗಾರಿ ಆಗದೆ ಬಿಲ್ ಪಾವತಿ ಮಾಡಲಾಗಿದೆ ಎಂದು ವರದಿ ನೀಡಿದೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಿಗೆ ಬೆಂಕಿ ಅವಘಡ ನಡೆದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿದೆ.

ಮೂರು ಆಯಾಮಗಳಲ್ಲಿ ತನಿಖೆಗೆ ಸೂಚನೆ

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಘಟನೆ ಕುರಿತು ಮೂರು ಆಯಾಮಗಳಲ್ಲಿ ತನಿಖೆ ನಡೆಸಲು ಸೂಚಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

‘ಆಂತರಿಕ ತನಿಖೆ ನಡೆಸುವಂತೆ ಬಿಬಿಎಂಪಿ ತಾಂತ್ರಿಕ ತಂಡಕ್ಕೆ, ಪೊಲೀಸ್ ಇಲಾಖೆ ಹಾಗೂ ಇಂಧನ ಇಲಾಖೆ ಅಧಿಕಾರಿಗಳ ತಂಡಕ್ಕೂ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಮೂರು ಇಲಾಖೆಗಳಿಂದಲೂ ತನಿಖೆಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X