ಅರಣ್ಯಗಳು ಅಕ್ಷಯ ಪಾತ್ರೆಗಳಲ್ಲ ಎನ್ನುವ ಸತ್ಯವನ್ನು ಅರಿತು, ಮುಂದಿನ ತಲೆಮಾರು ತಣ್ಣಗೆ ಬದುಕುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ನಿವೃತ್ತ ಐಎಫ್ಎಸ್ ಅಧಿಕಾರಿ ಎ.ಸಿ. ಲಕ್ಷ್ಮಣ್ ಅವರು, ಈ ಬರಹದ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸಿದ್ದಾರೆ.
ಚಿಕ್ಕ ವಯಸ್ಸಿಗೇ ಅರಣ್ಯ ಇಲಾಖೆಯ ಸೇವೆಗೆ ಪ್ರವೇಶಪಡೆದ ನನಗೆ ದಕ್ಷ ಅರಣ್ಯ ಅಧಿಕಾರಿಗಳ ಅಡಿಯಲ್ಲಿ ಮತ್ತು ಅತ್ಯುತ್ತಮ ಅರಣ್ಯ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದ ಅದೃಷ್ಟವಂತ ನಾನು. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ, ನನ್ನ ಪೂರ್ವಜರಿಂದ ಆನುವಂಶಿಕವಾಗಿ ಭೂಆಸ್ತಿಯು ಮಿತ ವಿಸ್ತೀರ್ಣವಾಗಿರದೆ ಅನಂತ ವಿಸ್ತಾರವಾದ ಅರಣ್ಯ ಪ್ರದೇಶಗಳವರೆಗೆ ವ್ಯಾಪಿಸಿದೆ ಎಂಬುದು ಅರಿವಾಯಿತು.
1965ರಲ್ಲಿ, ಶರಾವತಿ ನದಿ ಯೋಜನೆಯ ಅರಣ್ಯ ಮುಳುಗಡೆ ಅರಣ್ಯ ಪ್ರದೇಶದ ತೆರವಿನ ಮೇಲ್ವಿಚಾರಣೆಗೆ ನನ್ನನ್ನು ನೇಮಿಸಲಾಯಿತು. ಮುಳುಗಡೆ ಪ್ರದೇಶವು ಸುಮಾರು 80 ಚದರ ಮೈಲುಗಳಷ್ಟು ವಿಸ್ತಾರವಾಗಿದ್ದು, ಸಾಗರ ಮತ್ತು ಹೊಸನಗರ ತಾಲ್ಲೂಕುಗಳಲ್ಲಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹರಡಿತ್ತು. ಅದು ರಾಜ್ಯದ ವಿದ್ಯುತ್ ಉತ್ಪಾದನೆಯ ಒಂದು ಪ್ರಮುಖ ಯೋಜನೆಯಾಗಿತ್ತು. ದೊಡ್ಡ ಸುತ್ತಳತೆ ಮತ್ತು ಎತ್ತರದ ನಿತ್ಯಹರಿದ್ವರ್ಣ ಅರಣ್ಯ ಮರಗಳಿಂದ ಕೂಡಿದ ಸಮೃದ್ಧ ಅರಣ್ಯ ಪ್ರದೇಶವಾಗಿತ್ತು. ಸಾವಿರಾರು ಕಾರ್ಮಿಕರು ಕಾಡುಗಳನ್ನು ತೆರವುಗೊಳಿಸುತ್ತಿದ್ದರು. ನೂರಾರು ಟ್ರಕ್ ಲೋಡ್ ಅರಣ್ಯ ಉತ್ಪನ್ನಗಳನ್ನು ಮರದ ಡಿಪೋಗಳಿಗೆ, ಬಿದಿರನ್ನು ಮೈಸೂರು ಪೇಪರ್ ಮಿಲ್‌ಗಳಿಗೆ, ಇದ್ದಿಲನ್ನು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸಾಗಿಸಲಾಗುತ್ತಿತ್ತು. ವಿವಿಧ ಪ್ಲೈವುಡ್ ಮತ್ತು ಬೆಂಕಿಕಡ್ಡಿ ಕೈಗಾರಿಕೆಗಳಿಗೆ ಮರವನ್ನು ಬಳಸಲಾಗುತ್ತಿತ್ತು ಮತ್ತು ಕೇರಳದ ಮಾವೂರಿನಲ್ಲಿರುವ ಗ್ವಾಲಿಯರ್ ರೇಯಾನ್ ಕಾರ್ಖಾನೆಗೆ ಬಿದಿರನ್ನು ಸಂಗ್ರಹಿಸಲಾಗುತ್ತಿತ್ತು. ಕಾಲಾನಂತರದಲ್ಲಿ, ಸಮೃದ್ಧ ಅರಣ್ಯ ಪ್ರದೇಶವು ಬೀಳುಭೂಮಿ ಮತ್ತು ಮರುಭೂಮಿಯಂತೆ ಕಾಣುತ್ತಿತ್ತು. 1968ರಲ್ಲಿ, ಶರಾವತಿ ವಿದ್ಯುತ್ ಕೇಂದ್ರದಲ್ಲಿ ಉತ್ಪಾದಿಸುವ ಎಲ್ಲಾ ವಿದ್ಯುತ್ ಅನ್ನು ನಾವು ಬಳಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ವಿದ್ಯುತ್ ನಿಗಮವು ಟರ್ಬೈನ್‌ಗಳ ಕಾರ್ಯಾಚರಣೆಯನ್ನು ಸರದಿಯ ಮೇಲೆ ನಿರ್ವಹಿಸುತ್ತಿತ್ತು.
ಇದನ್ನು ಓದಿದ್ದೀರಾ?: ಕನ್ನಡದ ಹಿರಿಮೆಯನ್ನು ಬಾನೆತ್ತರಕ್ಕೆ ಏರಿಸಿದ ಬಾನು ಮುಷ್ತಾಕ್
ಈ ಪ್ರದೇಶದಿಂದ ಹೊರತೆಗೆಯಲಾದ ವಿವಿಧ ಅರಣ್ಯ ಉತ್ಪನ್ನಗಳ ಪ್ರಮಾಣದ ಬಗ್ಗೆ ದತ್ತಾಂಶ ಸಂಗ್ರಹಿಸುವಲ್ಲಿ ನಾನು ಸಾಕಷ್ಟು ಸಮಯ ಕಳೆದೆ. ಇಷ್ಟು ದೊಡ್ಡ ಪ್ರದೇಶದಿಂದ ಸಂಗ್ರಹಿಸಿದ ಮೊದಲ ದಾಖಲಿತ ದತ್ತಾಂಶ ಇದಾಗಿತ್ತು. ಪ್ರತಿ ಎಕರೆಗೆ ಮರ, ಪ್ಲೈವುಡ್ ಮತ್ತು ಬೆಂಕಿಕಡ್ಡಿ, ಬಿದಿರು, ಇದ್ದಿಲು ಇತ್ಯಾದಿಗಳ ಉತ್ಪಾದನೆಯನ್ನು ನಾನು ಲೆಕ್ಕ ಹಾಕಿದೆ. ಕಾರವಾರದಲ್ಲಿ ಇದ್ದವರಲ್ಲಿ ಹೆಚ್ಚಿನವರು ಬಡವರು ಮತ್ತು ಪ್ರತಿ ಮನೆಯಲ್ಲೂ ತೆಂಗಿನ ಮರಗಳಿದ್ದು, ಅವುಗಳ ಗರಿ ಇತರೆ ತ್ಯಾಜ್ಯವನ್ನು ಉರುವಲಾಗಿ ಬಳಸತ್ತಿದ್ದರು. ಆದ್ದರಿಂದ ಅರಣ್ಯಮೂಲದ ಉರುವಲಿನ ತಲಾ ಬಳಕೆ ಕಡಿಮೆಯಾಗಿತ್ತು. ಈ ದತ್ತಾಂಶವನ್ನು ಆಧರಿಸಿ ನಾನು ‘ಮೈಫಾರೆಸ್ಟ್’ ಸಂಶೋಧನಾ ಪತ್ರಿಕೆಯಲ್ಲಿ ಒಂದು ಲೇಖನವನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯು ಹೆಚ್ಚಾದಂತೆ, ಸರ್ಕಾರವು ಹೆಚ್ಚಿನ ವಿದ್ಯುತ್ ಉತ್ಪಾದನೆಯ ಅಗತ್ಯವನ್ನು ಮನಗಂಡಿತು. ಅದಕ್ಕಾಗಿ ವಿದ್ಯುತ್ ನಿಗಮವು ಕಾಳಿ ನದಿ ಯೋಜನೆಯನ್ನು ಯೋಜಿಸಿತು. ನನ್ನ ಅದೃಷ್ಟವೋ ಅಥವಾ ದುರದೃಷ್ಟವೋ 1972-73ರಲ್ಲಿ ಕಾರವಾರದಲ್ಲಿ ಪಶ್ಚಿಮ ಘಟ್ಟದ ಕಾಡುಗಳನ್ನು ತೆರವುಗೊಳಿಸುವ ಕಾರ್ಯ ನನಗೇ ಒದಗಿಬಂತು. ಆ ವೇಳೆಗೆ ನನಗೆ ಅಂತಹ ಶ್ರೀಮಂತ ಕಾಡುಗಳನ್ನು ತೆರವುಗೊಳಿಸಿದ ಅಪರಾಧಿ ಭಾವನೆ ಕಾಡಲು ಪ್ರಾರಂಭಿಸಿತು. ಸರ್ಕಾರಿ ಯೋಜನೆಯು ರಾಜ್ಯದ ಮನೆಗಳು ಮತ್ತು ಕೈಗಾರಿಕೆಗಳನ್ನು ಬೆಳಗಿಸಿದರೆ, ನಮ್ಮ ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ನೈಸರ್ಗಿಕ ಕಾಡುಗಳು ನೀಲಿ ನೀರಿನ ವಿಶಾಲವಾದ ವಿಸ್ತಾರಗಳಲ್ಲಿ ಮುಳುಗಿ ಲಕ್ಷಾಂತರ ಸೂಕ್ಷ್ಮ ಮತ್ತು ದೊಡ್ಡ ಜೀವಿಗಳನ್ನು ಕೊಂದವು. ಮುಳುಗಡೆಯಾದ ವಿಸ್ತೀರ್ಣಕ್ಕೆ ಸಮಾನವಾದ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವ ಪ್ರಯತ್ನಗಳು ಎಂದೂ ಯೋಜಿಸಿರಲಿಲ್ಲ. ನಮ್ಮ ಅರಣ್ಯೀಕರಣ ಪ್ರಯತ್ನ ದುರ್ಬಲವಾಗಿತ್ತು ಮತ್ತು ಅದು ತೆರವುಗೊಳಿಸಿದ ಪ್ರದೇಶಕ್ಕೆ ಹೋಲಿಸಿದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿತ್ತು.
1973ರಲ್ಲಿ ಪಶ್ಚಿಮ ಘಟ್ಟಗಳ ಕೊಡಗಿನ ಅತ್ಯಂತ ಶ್ರೀಮಂತ ನಿತ್ಯಹರಿದ್ವರ್ಣ ಕಾಡುಗಳಿಗೆ ನನ್ನನ್ನು ನಿಯೋಜಿಸಿದಾಗ, ಹಾರಂಗಿ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯವನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಕ್ಕಾಗಿ ನನಗೆ ತುಂಬಾ ನೋವಾಯಿತು.
ಯಾವುದೇ ಪರಿಹಾರರೂಪದ ಗಿಡನೆಡುವ ಯೋಜನೆಗಳಿಲ್ಲದೆಯೇ ತೀವ್ರವೇಗದಲ್ಲಿ ಅರಣ್ಯ ನಾಶವಾಗುತ್ತಿರುವುದನ್ನು ಅರಿತು, ಅರಣ್ಯಗಳ ನಾಶ ಮತ್ತು ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯತೆಯ ಕುರಿತು ನಾನು ಪತ್ರಿಕೆಗಳನ್ನು ಪ್ರಕಟಿಸಲು ಪ್ರಾರಂಭಿಸಿದೆ.
1976ರಲ್ಲಿ, ನನ್ನ ಕನ್ನಡ ಕಿರುಪುಸ್ತಕ ‘ಕರ್ನಾಟಕ ವನ್ಯ ಸಂಪತ್ತು’ ಇಂಡಿಯಾ ಬುಕ್ ಹೌಸ್ ಮೂಲಕ ಪ್ರಕಟವಾಯಿತು. ಆ ಕಿರುಪುಸ್ತಕಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಓದುಗರು, ನನ್ನ ಹಿರಿಯ ಅಧಿಕಾರಿಗಳು, ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೂಡ ಇದನ್ನು ಮೆಚ್ಚಿದರು.
ಆದರೂ, ಪುಸ್ತಕದಲ್ಲಿದ್ದ ಒಂದು ಅಧ್ಯಾಯದ ಬಗ್ಗೆ ಕೆಲವು ಅಧಿಕಾರಿಗಳಲ್ಲಿ ಕೆಲವು ಭಿನ್ನಾಭಿಪ್ರಾಯವಿತ್ತು. ಅರಣ್ಯಗಳ ನಾಶವು ಇದೇ ವೇಗದಲ್ಲಿ ಮುಂದುವರೆದರೆ ಮತ್ತು ಅರಣ್ಯೀಕರಣ ಮಾಡುವ ನಮ್ಮ ಪ್ರಯತ್ನಗಳು ಯಥಾ ಈ ಸ್ಥಿತಿಯಲ್ಲಿ ಉಳಿದರೆ, 2002ರ ನಂತರ ನಮ್ಮ ಕಾಡುಗಳಿಗೆ ಉರುವಲು ಪೂರೈಸಲು ಸಾಧ್ಯವಾಗುವುದಿಲ್ಲ ಎಂಬ ಭವಿಷ್ಯದ ನೋಟವನ್ನು ನೀಡಿದ್ದೆ. ನಮ್ಮ ಕಾಡುಗಳು ತುಂಬಾ ಸಮೃದ್ಧವಾಗಿದ್ದು, ಅವು ನಮ್ಮ ಬೇಡಿಕೆಗಳನ್ನು ಅನಂತವಾಗಿ ಪೂರೈಸುತ್ತಲೇ ಇರುತ್ತವೆ ಎಂದು ಅವರು ವಾದಿಸಿದರು. ಅವರು ನನ್ನ ಕೆಲಸವನ್ನು ಟೀಕಿಸಿದರು ಮತ್ತು ಅಪಹಾಸ್ಯ ಮಾಡಿದರು. ಮತ್ತು ಅಧಿಕಾರಿಗಳ ಸಭೆಯೊಂದರಲ್ಲಿ ಅದನ್ನು ಬಾಲಿಶ ಎಂದು ಕರೆದರು. ಇನ್ನೂ ಕೆಲವು ಅಧಿಕಾರಿಗಳು ಆ ಅಭಿಪ್ರಾಯವನ್ನು ಅನುಮೋದಿಸಿದರು.
ತಾಳ್ಮೆಯಿಂದ ಕೇಳಿದ ನಂತರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್. ಮಾವಿನ್‌ಕುರ್ವೆ ಅವರು ನಾನು ಮಂಡಿಸಿದ ನೋಟಕ್ಕೆ ಸಮರ್ಥನೆ ನೀಡಲು ತಿಳಿಸಿದರು. ನಾನು ಈ ವಿಷಯದ ಬಗ್ಗೆ ಮೂರು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಂಗ್ರಹಿಸಿದ ದಾಖಲೆ ಮತ್ತು ಅನುಭವಗಳನ್ನು ಆಧರಿಸಿ ನನ್ನ ತೀರ್ಮಾನಕ್ಕೆ ತಲುಪಿರುವ ಬಗ್ಗೆ ವಿವರಿಸಿದೆ. ನನ್ನ ಸಮರ್ಥನೆಯನ್ನು ಕೇಳಿದ ನಂತರ, ಮಾವಿನ್‌ಕುರ್ವೆ ನನ್ನ ವರದಿಯನ್ನು ಟೀಕಿಸಿದ ಎಲ್ಲರನ್ನು ಉದ್ದೇಶಿಸಿ ಇತರರು ತಮ್ಮ ಸಂಶೋಧನೆಯ ಮೂಲಕ ನನ್ನದಕ್ಕಿಂತ ಭಿನ್ನವಾದ ಮತ್ತು ಮನದಟ್ಟುಮಾಡುವ ವಿಚಾರ ಹೊರಬರುವವರೆಗೆ, ನಾನು ಊಹಿಸಿರುವ ವಿಚಾರ ಸ್ವೀಕಾರಾರ್ಹವಾಗಿ ಉಳಿಯುತ್ತದೆ ಎಂದು ಹೇಳಿದರು.
1994ರಲ್ಲಿ ನಾನು ಸರ್ಕಾರದ ಕಾರ್ಯದರ್ಶಿಯಾದೆ. ಇಲಾಖೆಯಲ್ಲಿ ಉರುವಲು ದಾಸ್ತಾನು ಇಲ್ಲದ ಕಾರಣ ಎಲ್ಲಾ ಉರುವಲು ಡಿಪೋಗಳನ್ನು ಮುಚ್ಚಲು ಪಿಸಿಸಿಎಫ್‌ನಿಂದ ಪ್ರಸ್ತಾವನೆ ಬಂದಿತು. ಕರ್ನಾಟಕದ ಎಲ್ಲಾ ಉರುವಲು ಡಿಪೋಗಳನ್ನು ಮುಚ್ಚುವ ಸರ್ಕಾರಿ ಆದೇಶವನ್ನು ನಾವು ಹೊರಡಿಸಿದೆವು. ಅರಣ್ಯ ಇಲಾಖೆಯು ಸಾರ್ವಜನಿಕರ ಅಗತ್ಯಕ್ಕೆ ಉರುವಲು ಪೂರೈಸಲಾಗದ ಸ್ಥಿತಿಯು ನಾನು ಊಹಿಸಿದ ಕಾಲಕ್ಕಿಂತ ಎಂಟು ವರ್ಷಗಳ ಮೊದಲೇ ಸಂಭವಿಸಿತ್ತು. ಉರುವಲು, ಮರ, ಪ್ಲೈವುಡ್ ಮತ್ತು ಶ್ರೀಗಂಧಕ್ಕೆ ಏನಾಗುತ್ತದೆ ಎಂಬುದರ ಸನ್ನಿವೇಶವನ್ನು ನಾನು ಊಹಿಸಿದ್ದೆ.
ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಇಂಥ ಗಂಭೀರ ವಿಚಾರದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು, ಕಾರ್ಯಾಗಾರಗಳು ಮತ್ತು ವ್ಯಾಪಕ ಪ್ರಚಾರದ ಮೂಲಕ ತಿಳಿವು ಮೂಡಿಸುವ ಅಗತ್ಯವಿದೆ. ಅರಣ್ಯಗಳು ಅನಂತ ಕಾಲದವರೆಗೆ ಉಳಿಯುವ ಅಕ್ಷಯಪಾತ್ರೆಗಳಲ್ಲ.
ಆದರೆ ನನ್ನ ಮುಂಚಿನ ಎಚ್ಚರಿಕೆಯನ್ನು ಅನೇಕರು ಕೇಳಲಿಲ್ಲ. ಇಂದು ನಾವು ಪ್ರವಾಹ ಮತ್ತು ಕ್ಷಾಮಗಳ ಉಗ್ರತೆಯನ್ನು ಮಣ್ಣಿನ ಸವೆತ, ಇಳುವರಿ ಕ್ಷೀಣಿಸುವಿಕೆ, ದುಬಾರಿ ಸಾರಜನಕ ಗೊಬ್ಬರಗಳ ಮೇಲಿನ ಅವಲಂಬನೆ, ಮಣ್ಣಿನ ಫಲವತ್ತತೆಯ ಹಾನಿ, ಬಡತನ, ರೈತರ ಆದಾಯದ ನಷ್ಟ, ಪರಿಣಾಮವಾಗಿ ಆತ್ಮಹತ್ಯೆಗಳು, ಮಾನವ-ಪ್ರಾಣಿ ಸಂಘರ್ಷ ಹೆಚ್ಚಳ, ತಾಪಮಾನ ಹೆಚ್ಚಳ, ಮಾಲಿನ್ಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ನಲವತ್ತೊಂಬತ್ತು ವರ್ಷಗಳ ಹಿಂದಿನ ಎಚ್ಚರಿಕೆಯ ನಂತರವೂ, ಸಮಾಜವು ಈ ಬಹಳ ಮುಖ್ಯವಾದ ವಿಷಯವನ್ನು ನಿರ್ಲಕ್ಷಿಸಿದೆ. ಆದ್ದರಿಂದ ಸಮಾಜಕ್ಕೆ ಈ ಮನವಿ.
ಪರಿಹಾರದ ಕ್ರಮವಾಗಿ, ರೈತರ ಜಮೀನುಗಳಲ್ಲಿ ‘ಬಹುಮಹಡಿ ಸಮಗ್ರ ವನತೋಟಗಾರಿಕೆ’ಯನ್ನು ನಾನು ಸಲಹೆ ಮಾಡುತ್ತೇನೆ. ಇದನ್ನು ನಾವು 1989ರಲ್ಲಿ ಬೆಂಗಳೂರು ವಿಭಾಗದ ಜಲಾನಯನ ಪ್ರದೇಶಗಳಲ್ಲಿ ಪ್ರಯತ್ನಿಸಿದ್ದೇವೆ. ಈ ವಿಧಾನಕ್ಕೆ ಉತ್ತಮ ಅವಕಾಶಗಳು ಕಂಡುಬಂದಿದ್ದರಿಂದ, ನನ್ನನ್ನು ವರ್ಗಾಯಿಸಲಾಯಿತು ಮತ್ತು ನಮ್ಮ ಪ್ರಯೋಗವನ್ನು ನಿಲ್ಲಿಸಲಾಯಿತು. ನಿವೃತ್ತಿಯ ನಂತರ ನಾನು ಇದನ್ನು ಮತ್ತೆ ಪ್ರಯತ್ನಿಸಿದ್ದೇನೆ ಮತ್ತು ಇದು ಆರ್ಥಿಕ ಮತ್ತು ಪರಿಸರ ದೃಷ್ಟಿಕೋನದಿಂದ ಯಶಸ್ಸನ್ನು ನೀಡಿದೆ. ಇದನ್ನು ಈಗ ರೈತರ ಜಮೀನಿಗೂ ವಿಸ್ತರಿಸಲಾಗುತ್ತಿದೆ. ಇದು ಯಶಸ್ಸನ್ನು ಸಹ ತೋರಿಸುತ್ತಿದೆ. ಈ ವಿಧಾನದಲ್ಲಿ ಯಶಸ್ಸಿನ ಪ್ರಮಾಣ, ಕಾರ್ಯಕ್ಷಮತೆ, ಉತ್ಪಾದಕತೆ, ಲಾಭದಾಯಕತೆ ಹೆಚ್ಚು ಉತ್ತಮವಾಗಿರುತ್ತದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಣ್ಣಪ್ರಮಾಣದ ಗುಡಿಕೈಗಾರಿಕೆಗಳಿಗೆ ಕೃಷಿ ಉತ್ಪನ್ನಗಳನ್ನು ಪೂರೈಸುವಂಥ ಸಂಪರ್ಕ ಸಾಧನಗಳಿಗೆ ಅವಕಾಶ ಕಲ್ಪಿಸುವ ಸೂಕ್ತವಾದ ನೀತಿಗಳನ್ನು ಸರ್ಕಾರವು ರೂಪಿಸಬೇಕು. ಇದು ಏಕೈಕ ಪರ್ಯಾಯವಾಗಿದ್ದು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಿದರೆ, ಇದು ಕರ್ನಾಟಕಕ್ಕೆ ಸಮೃದ್ಧಿಯನ್ನು ತರುತ್ತದೆ.
ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು, ದೊಡ್ಡ ಕೈಗಾರಿಕಾ ಮತ್ತು ಇತರ ಸಂಸ್ಥೆಗಳು ಪ್ರತಿ ಜಿಲ್ಲೆಗೆ ಸೂಕ್ತವಾದ ಕಸಿ ಮಾಡಿದ ಮತ್ತು ಅಥವಾ ಉತ್ತಮ ಗುಣಮಟ್ಟದ ಸಸಿಗಳನ್ನು ಪೂರೈಸುವಲ್ಲಿ ತೊಡಗಿಸಿಕೊಳ್ಳಬೇಕು. ಕೆಲವು ವರ್ಷಗಳ ಹಿಂದೆ ರಾಜ್ಯ ಯೋಜನಾ ಆಯೋಗದ ಸದಸ್ಯನಾಗಿ, ಅಧಿಕಾರದಲ್ಲಿರುವ ಜನರ ಗಮನ ಸೆಳೆಯುವಲ್ಲಿ ನನ್ನ ಪ್ರಯತ್ನಗಳು ವಿಫಲವಾದವು. ಮತ್ತೊಮ್ಮೆ, ನಾನು ಈ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅತೀಕ್ ಅವರ ಗಮನಕ್ಕೆ ತಂದಿದ್ದೇನೆ. ಇಬ್ಬರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಾನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಮೀನಾಕ್ಷಿ ನೇಗಿ ಅವರಿಗೂ ನೆನಪಿಸಿದ್ದೇನೆ. ಇಂಥ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕವು ಶ್ರೀಮಂತ ಸಂಪನ್ಮೂಲಗಳು, ಅತ್ಯುತ್ತಮ ಕೈಗಾರಿಕೀಕರಣ ಮತ್ತು ಜಾಗೃತ ರಾಜಕಾರಣಿಗಳು ಮತ್ತು ದಕ್ಷ ಅಧಿಕಾರಿಗಳಿಂದ ಸನ್ನದ್ಧವಾಗಿದೆ.
ಆದರೆ ಇತ್ತೀಚೆಗೆ ಆಡಳಿತಕ್ಕಿಂತಲೂ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ರಾಜಕೀಯ ನಾಯಕರುಗಳಿಗೆ ನನ್ನ ವಿಶೇಷ ಮನವಿ- ಅಧಿಕಾರಿಗಳಲ್ಲಿ ತಮ್ಮ ರಾಜಕೀಯ ನಾಯಕರಂತೆ ವರ್ತಿಸುವ ಪ್ರವೃತ್ತಿಯು ಕಂಡುಬರುತ್ತಿದೆ. ಆದರೆ ಅದಕ್ಕೆ ಅಪವಾದವಾಗಿರುವ ಜನರು ಸಾಕಷ್ಟು ಇದ್ದಾರೆ. ಅವರನ್ನು ಆಯ್ಕೆ ಮಾಡಿಕೊಂಡು, ಇದನ್ನು ಅವರ ಮೂಲಕ ಜಾರಿಗೊಳಿಸಿದರೆ, ಮುಂದಿನ ತಲೆಮಾರು ನಮ್ಮನ್ನು ನೆನಪಿಸಿಕೊಳ್ಳುತ್ತದೆ.

ನಾವು ಹಳೆಯ ಮಾದರಿಯಲ್ಲೇ ಕಾರ್ಯಕ್ರಮ ಜಾರಿವಿಧಾನವನ್ನು ನಂಬಿಕೂರುವಂತಿಲ್ಲ. ಯಶಸ್ಸಿನ ಮೇಲೆ ಬದುಕಲು ಸಾಧ್ಯವಿಲ್ಲ. ಈಗ ವೇಗದ ಗತಿಯಲ್ಲಿ ಕಾರ್ಯಕ್ರಮ ಜಾರಿಯಾಗುವ ಅವಶ್ಯಕತೆಯಿದೆ. ಯಾವುದೇ ವಿಳಂಬವು ಪರಿಸರ ಅವನತಿಯ ಅಂಚಿಗೆ ದೂಡುತ್ತದೆ. ಅದು ರಾಜ್ಯದ ಸುಸ್ಥಿರ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ಎಚ್ಚರಿಕೆಯನ್ನು ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಅರಿಯಬೇಕಾಗಿದೆ.