“ಹಿಂದೂ ಕಾರ್ಯಕರ್ತರು ಯಾರೂ ಒಬ್ಬೊಬ್ಬರೇ ಓಡಾಡಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೆ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ” ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಆರೋಪಿಸಿದ್ದಾರೆ.
ಇತ್ತೀಚೆಗೆ ಹತ್ಯೆಗೊಳಗಾದ ಮೈಸೂರು ಜಿಲ್ಲೆಯ ತಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರ ನಿವಾಸಕ್ಕೆ ಬುಧವಾರ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿದರು. “ಈ ವಿಚಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ. ಎಲ್ಲರಿಗೂ ಶಿಕ್ಷೆಯಾಗಬೇಕು, ನಾವೆಲ್ಲ ಹೋರಾಟ ಮಾಡುತ್ತೇವೆ” ಎಂದು ವೇಣುಗೋಪಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ವೇಣುಗೋಪಾಲ್ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಡಿಯೂರಪ್ಪರನ್ನು ಯಾರು, ಯಾಕೆ ಕೆಳಗಿಳಿಸಿದರು ಎಂಬುದು ಇದುವರೆಗೂ ಗೊತ್ತಿಲ್ಲ: ಜಿ ಟಿ ದೇವೇಗೌಡ
“ಮೊಬೈಲ್ ಪರಿಶೀಲಿಸಿದರೆ ಯಾರೆಲ್ಲ ಕರೆ ಮಾಡಿದ್ದಾರೆ ಗೊತ್ತಾಗುತ್ತೆ. ವೇಣುಗೋಪಾಲ ನಾಯಕ ಯಾವ ಕ್ರಿಮಿನಲ್ ಕೆಲಸ ಮಾಡಿಲ್ಲ. ಇದು ಧರ್ಮದ ವಿಚಾರವಾಗಿ ನಡೆದಿರುವ ಕೊಲೆ. ಧರ್ಮ ಅಂತ ಬಂದಾಗ ನಾವೆಲ್ಲ ಒಂದೇ. ಇದರಲ್ಲಿ ಯಾವುದೇ ಪಕ್ಷ ಅನ್ನುವುದು ಇಲ್ಲ. ಕೊಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಯಾರ ಕುಮ್ಮಕ್ಕಿನಿಂದ ಆಗಿರುವುದು ಎಂಬುದು ಗೊತ್ತಾಗುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ.