- ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಘಟನೆಗೆ ಖಂಡನೆ
- ಮೇ 4 ರಂದು ನಡೆದ ಘಟನೆಯ ವಿಡಿಯೋ ಮೇ 19ಕ್ಕೆ ವೈರಲ್
ಮಣಿಪುರ ರಾಜ್ಯದ ಕಾಂಗ್ಪೋಕ್ಷಿ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಗುಂಪಿನಲ್ಲಿದ್ದ ವ್ಯಕ್ತಿ ಮತ್ತು ಮಹಿಳೆಯರನ್ನು ಎಳೆದೊಯುತ್ತಿದ್ದ ವ್ಯಕ್ತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಶುಕ್ರವಾರ (ಜುಲೈ 21) ಬಂಧಿಸಲಾಗಿದೆ.
ಗುರುವಾರ ಸಂಜೆ ಹೊತ್ತಿಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದರು. ಕೆಲವು ಗಂಟೆಗಳ ನಂತರ, ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಣಿಪುರ ರಾಜ್ಯದಲ್ಲಿ ಮೇ 4ರಂದು ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಬುಧವಾರದಿಂದ (ಜುಲೈ 19) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಬಂಧಿತನಾದ ಮೊದಲ ವ್ಯಕ್ತಿಯನ್ನು ಹುಯಿರೆಮ್ ಹೆರದಾಶ್ ಸಿಂಗ್ ಎಂದು ಗುರುತಿಸಲಾಗಿದೆ. ಕಾಂಗ್ಪೋಕ್ಷಿ ಜಿಲ್ಲೆಯಲ್ಲಿ ಈ ಹೀನ ಕೃತ್ಯ ಎಸಗಲು ಆರೋಪಿಗಳ ಗುಂಪಿಗೆ ನಿರ್ದೇಶನ ನೀಡಿರುವುದು ಬುಧವಾರ ಬಯಲಾದ ವಿಡಿಯೋದಲ್ಲಿ ಕಂಡು ಬಂದಿದೆ. ಬಂಧಿತ ಇತರ ಮೂವರು ವ್ಯಕ್ತಿಗಳ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಣಿಪುರ ಹಿರಿಯ ಅಧಿಕಾರಿಗಳು ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಬಂಧಿತ ವ್ಯಕ್ತಿಗಳು ಮತ್ತು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಣಿಪುರ ಈ ಘಟನೆಯ ವಿಡಿಯೊ ಬಯಲಾಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಗುರುವಾರ ರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತೌಬಲ್ ಜಿಲ್ಲೆಯ ನಾಂಗ್ಪೋಕ್ ಸೆಕ್ಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇತರೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 32 ವರ್ಷದ ಆರೋಪಿ ಹುಯಿರೆಮ್ ಹೆರದಾಶ್ ಸಿಂಗ್ನನ್ನು ತೌಬಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಮಣಿಪುರ ಘಟನೆಯಲ್ಲಿ ಆರೋಪಿಗಳ ಗುಂಪು ಮಹಿಳೆಯರನ್ನು ಬಿಡುಗಡೆ ಮಾಡುವ ಮೊದಲು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? 1800 ಗಂಟೆಗಳ ದೀರ್ಘ ಮೌನದ ಬಳಿಕ 30 ಸೆಕೆಂಡ್ ಮಾತು: ಮೋದಿ ಹೇಳಿಕೆ ಕುರಿತು ಕಾಂಗ್ರೆಸ್ ವಾಗ್ದಾಳಿ
ಅಲ್ಲದೆ ಗ್ರಾಮಸ್ಥರು, ಬಂಧಿತ ಆರೋಪಿ ಹೆರದಾಶ್ ಸಿಂಗ್ ಅವರ ಮನೆಗೆ ಬೆಂಕಿ ಹಚ್ಚಿದ್ದು, ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, “ಇದೊಂದು ಅಮಾನವೀಯ ಕೃತ್ಯ” ಎಂದು ಕರೆದಿದ್ದಾರೆ. ಅಪರಾಧಿಗಳಿಗೆ ಗರಿಷ್ಠ ಪ್ರಮಾಣದ ದಂಡನೆ ನೀಡಬೇಕು ಎಂದು ಹೇಳಿದ್ದಾರೆ.