ಚಾರಣಕ್ಕೆಂದು ತೆರಳಿದ್ದ ವೇಳೆ ಕರ್ನಾಟಕದ ನಾಲ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ತಂಡದ ನೆರವಿಗಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ, “ಕರ್ನಾಟಕದ 20 ಜನ ಚಾರಣಿಗರು ಹಾಗೂ ಓರ್ವ ಗೈಡ್ ಒಳಗೊಂಡ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಶಾಸ್ತ್ರತಾಳ್ ಮಯಳಿ ಎಂಬ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿದ್ದಾರೆ. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಯತ್ನಿಸಿದೆ. ಆದರೆ, ಹಿಂತಿರುಗುವ ಮಾರ್ಗದ ಮಾಧ್ಯೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಎಲ್ಲಾ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದರು” ಎಂದು ತಿಳಿಸಿದ್ದಾರೆ.
“ಕರ್ನಾಟಕದ ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿದೆ ಎಂಬ ಮಾಹಿತಿ ನಿನ್ನೆ ರಾತ್ರಿ ನಮಗೆ ತಿಳಿದುಬಂದಿತ್ತು. ಈ ವಿಚಾರ ತಿಳಿದ ಕೂಡಲೇ ಜಿಲ್ಲಾಡಳಿತದ ಮುಖಾಂತರ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಲಾಯಿತು. ಇವರ ಸಹಾಯದಿಂದ ಕರ್ನಾಟಕದ ಚಾರಣಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಸಚಿವರು ತಿಳಿಸಿದ್ದಾರೆ.
Rescue efforts are continuing with the help of Uttarakhand Government , Indian Mountaineering Federation and Home Department of Government of India.
Rescued trekkers are reaching Dehradun. We are also getting reports of loss of lives which we are trying to reconfirm with local… pic.twitter.com/fk83PLKus6— Krishna Byre Gowda (@krishnabgowda) June 5, 2024
“ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಹಾಯದಿಂದ ನಿನ್ನೆ ಸಂಜೆಯಿಂದಲೇ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅಲ್ಲದೆ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಇಂದು ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ಜೊತೆಗೆ ಇಂದು ಬೆಳಗ್ಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಲು ಪ್ರಾರಂಭಿಸಿದೆ. ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಕೆಲವು ಚಾರಣಿಗರನ್ನು ಈವರೆಗೆ ರಕ್ಷಿಸಲಾಗಿದ್ದು, ಅವರನ್ನು ಡೆಹ್ರಾಡೂನ್‌ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
“ಚಾರಣಿಗರ ಪೈಕಿ ಒಬ್ಬರೊಂದಿಗೆ ಸ್ವತಃ ನಾನು ಮಾತನಾಡಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲಾಗಿದೆ. ಉಳಿದವರನ್ನೂ ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದ್ದು, ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ತನ್ನಿಂದಾದ ಎಲ್ಲ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ಕಾರ್ಯಾಚರಣೆಗೆ ಸಹಕಾರ ಒದಗಿಸುವ ಸಲುವಾಗಿ ಸ್ವತಃ ನಾನು ಸಹ ಬುಧವಾರ ಮಧ್ಯಾಹ್ನ ಡೆಹ್ರಾಡೂನ್‌ಗೆ ಹೊರಟಿದ್ದೇನೆ” ಎಂದು ತಿಳಿಸಿದ್ದಾರೆ.
“ದುರದೃಷ್ಟವಶಾತ್ ಕೆಲವು ಚಾರಣಿಗರು ಮೃತಪಟ್ಟಿರುವ ವರದಿಯೂ ಲಭ್ಯವಾಗಿದ್ದು, ಅದನ್ನು ನಾವು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರುದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ. ಮೃತ ಚಾರಣಿಗರ ಮೃತದೇಹಗಳನ್ನು ಹೊರತೆಗೆಯಲು ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಸೂಚನೆ ನೀಡಿದ್ದಾರೆ. ನಾವು ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
